ಈಗಿನ ಸುದ್ದಿ

ನಾಳೆಯೇ ತೆಲಂಗಾಣ ರಾಜ್ಯ ರಚನೆ ಘೋಷಣೆ ಸಾಧ್ಯತೆ

ನಾಳೆಯೇ ತೆಲಂಗಾಣ ರಾಜ್ಯ ರಚನೆ ಘೋಷಣೆ ಸಾಧ್ಯತೆ
Published On :

ನವದೆಹಲಿ: ನಾಳೆಯೇ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ. ಈ ಸಂಬಂಧ ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆ ನಡೆಯಲಿದ್ದು, ಸಭೆಯ ಬಳಿಕ ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ ಈಡೇರಿಸಲು ನಿರ್ಧರಿಸಿದ್ದ ಕಾಂಗ್ರೆಸ್, ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಜುಲೈ 31ಕ್ಕೆ ಸಿಡಬ್ಲ್ಯುಸಿ ಸಭೆ ಕರೆದಿತ್ತು. ಆದರೆ ಇಂದು ದಿಢೀರ್ ಸಭೆಯನ್ನು ನಾಳೆ ನಡೆಸಲು ತೀರ್ಮಾನಿಸಿದ್ದು, ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನ ಉನ್ನತ ಮೂಲಗಳ ಪ್ರಕಾರ, ತೆಲಂಗಾಣ ರಾಜ್ಯ ರಚನೆ ಖಚಿತವಾಗಿದ್ದು, ಈ ಬಗ್ಗೆ ನಾಳೆಯೇ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಂಧ್ರಪ್ರದೇಶದ ಪಂಚಾಯಿತಿ ಚುನಾವಣೆ ಅಂತ್ಯವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಉನ್ನತ ಮಟ್ಟದ ಸಭೆಯನ್ನು ನಾಳೆಯೇ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.

ಮಿತ್ರ ಪಕ್ಷಗೊಳೊಂದಿಗೆ ತೆಲಂಗಾಣ ಬಗ್ಗೆ ಚರ್ಚಿಸಿಲು ಕಾಂಗ್ರೆಸ್ ಮುಂದಾಗಿದೆ. ಆದರೆ ಎನ್‌ಸಿಪಿ ಮುಖ್ಯಸ್ಥ ಹಾಗೂ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಈಗಾಗಲೇ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಮತ್ತೊಂದು ಮಿತ್ರ ಆಲ್‌ಎಲ್‌ಡಿ ನಾಯಕ ಹಾಗೂ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಸಣ್ಣ ಸಣ್ಣ ರಾಜ್ಯ ರಚನೆಯ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರತಿಪಕ್ಷ ಬಿಜೆಪಿ ಸಹ ಪ್ರತ್ಯೇಕ ರಾಜ್ಯ ರಚನೆಗೆ ತನ್ನ ಬೆಂಬಲ ಘೋಷಿಸಿದ್ದು, ನಾವು ಪ್ರತ್ಯೇಕ ರಾಜ್ಯ ರಚನೆಯ ಪರವಾಗಿದ್ದೇವೆ. ರಾಜ್ಯ ರಚನೆಯ ಪ್ರಕ್ರಿಯೆ ತ್ವರಿತಗೊಳಿಸಿ  ಎಂದು ನಿನ್ನೆ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.