ತೆಲಂಗಾಣ ವಿರೋಧಿ ಸಚಿವರಿಂದ ಆಂಧ್ರ ಸಿಎಂಗೆ ರಾಜಿನಾಮೆ

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸುತ್ತಿದ್ದಂತೆ ಅಖಂಡ ಆಂಧ್ರಪ್ರದೇಶಕ್ಕಾಗಿ ಹೋರಾಟ ತೀವ್ರಗೊಂಡಿದ್ದು, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿರೋಧಿಸಿ ಬುಧವಾರ ಆಂಧ್ರಪ್ರದೇಶದ ಆರು ಸಚಿವರು ರಾಜಿನಾಮೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಂದು ಬೆಳಗ್ಗಷ್ಟೇ ಆಂಧ್ರ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರು ಆಂಧ್ರ ವಿಭಜನೆ ನಿರ್ಧಾರ ತಮಗೆ ನೋವು ತಂದಿದೆ ಎಂದು ತಮ್ಮ ಸಂಪುಟದ ಸಚಿವರ ಮುಂದೆ ಅಸಹಾಯಕತೆ ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಅವರ ಸಂಪುಟದ ಆರು ಸಚಿವರು ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸಿಎಂಗೆ ರಾಜಿನಾಮೆ ಪತ್ರ ನೀಡಿದ್ದಾರೆ ಎನ್ನಲಾಗಿದೆ.
ತೆಲಂಗಾಣ ರಾಜ್ಯ ಬೇಕೇ ಬೇಕು ಎಂಬ ಐದು ದಶಕಗಳ ಹೋರಾಟಕ್ಕೆ ಮಣಿದು, ನಿನ್ನೆ ದೇಶದ 29ನೇ ರಾಜ್ಯವಾಗಿ ತೆಲಂಗಾಣ ರಚನೆಗೆ ಯುಪಿಎ ಸಮನ್ವಯ ಸಮಿತಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಹಸಿರು ನಿಶಾನೆ ತೋರಿವೆ. ಆದರೆ ಇಂದು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಆಂಧ್ರದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ಕಡೆ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಆಂಧ್ರಪ್ರದೇಶಾದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ತೆಲಂಗಾಣ ಹೊರತುಪಡಿಸಿ ಸೀಮಾಂಧ್ರ ಹಾಗೂ ಕರಾವಳಿಯಲ್ಲಿ ಅಖಂಡ ಆಂಧ್ರ ವಿಭಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಜಂಟಿ ಸಂಯುಕ್ತ ಆಂಧ್ರಪ್ರದೇಶ ಚಳುವಳಿಗಾರರು ಕರೆ ನೀಡಿರುವ ಬಂದ್ ಹಿಂಸಾಚಾರಕ್ಕೆ ತಿರುಗಿದೆ.
ಪ್ರತಿಭಟನಾಕಾರರು ಅನಂತಪುರದ ಬಿಜೆಪಿ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ತಿರುಪತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆಂಧ್ರ ಕರಾವಳಿ ಭಾಗದಲ್ಲಿ ಮತ್ತು ರಾಯಲ್ ಸೀಮಾ ಪ್ರಾಂತ್ಯದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ರಾಜ್ಯಕ್ಕೂ ತಟ್ಟಿದ ತೆಲಂಗಾಣ ಬಿಸಿ
ತೆಲಂಗಾಣ ವಿರೋಧಿ ಪ್ರತಿಭಟನೆಯ ಬಿಸಿ ಕರ್ನಾಟಕಕ್ಕೂ ತಟ್ಟಿದ್ದು, ರಾಜ್ಯದಿಂದ ಆಂಧ್ರಪ್ರದೇಶದ ವಿವಿಧ ಸ್ಥಳಗಳಿಗೆ ತೆರಳಬೇಕಿದ್ದ ಕೆಎಸ್ಆರ್ಟಿಸಿ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ನಿನ್ನೆ ರಾತ್ರಿ ಆಂಧ್ರಕ್ಕೆ ತೆರಳಿರುವ ಬಸ್ಗಳು ಸಹ ಅಲ್ಲೇ ಉಳಿದುಕೊಂಡಿವೆ.
ಪರಿಸ್ಥಿತಿ ಸುಧಾರಿಸಿದ ನಂತರ ಬಸ್ ವ್ಯವಸ್ಥೆ ಮತ್ತೆ ಎಂದಿನಂತೆ ಇರಲಿದೆ. ಈಗಾಗಲೇ ಮುಂಗಡ ಬುಕ್ಕಿಂಗ್ ಮಾಡಿದ ಪ್ರಯಾಣಿಕರ ಹಣವನ್ನು ವಾಪಸ್ ನೀಡಲಾಗುವುದು ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


