ಬಿಸಿಸಿಐ ಸಭೆ ಆರಂಭ: ರಾಜಿನಾಮೆಗೆ ಶ್ರೀನಿ ಒಪ್ಪಿಗೆ?

ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ತೀವ್ರ ಟೀಕೆಗೆ ಒಳಗಾಗಿದ್ದ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ರಾಜಿನಾಮೆ ಸಮಯ ಸನ್ನಿಹಿತವಾಗಿದೆ.
ಚೆನ್ನೈನಲ್ಲಿ ಬಿಸಿಸಿಐ ಪದಾಧಿಕಾರಿಗಳ ಸಭೆ ಆರಂಭಗೊಂಡಿದ್ದು, ಸಭೆಯಲ್ಲಿ ಬಿಸಿಸಿಐನ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದಾರೆ. ಬಿಸಿಸಿಐ ಶಿಸ್ತು ಸಮಿತಿಯ ಅಧ್ಯಕ್ಷ ಅರುಣ್ ಜೇಟ್ಲಿ ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದು, ಉಳಿದಂತೆ ಮಾಜಿ ಖಜಾಂಚಿ ಅಜಯ್ ಶಿರ್ಕೆ ಮತ್ತು ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಸೇರಿದಂತೆ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ. ಅಲ್ಲದೆ ಸಭೆಯ ಕೇಂದ್ರ ಬಿಂದುವಾಗಿರುವ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ಸೇರಿದಂತೆ ಐಪಿಎಲ್ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಅವರು ಸಹ ಪಾಲ್ಗೊಂಡಿದ್ದಾರೆ. ಶ್ರೀನಿವಾಸನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಶ್ರೀನಿವಾಸನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ನಿರಾಕರಿಸಿದ್ದರಿಂದ ಸಭೆಯಲ್ಲಿ ಕೋಲಾಹಲವೇ ಉಂಟಾಯಿತು. ಅಲ್ಲದೆ ಕೆಲ ಸದಸ್ಯರಿಂದ ಶ್ರೀನಿವಾಸನ್ರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸುವ ಮಾತು ಕೂಡ ಕೇಳಿಬಂತು. ಆದರೆ ಈ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಪದಾಧಿಕಾರಿಗಳಿಂದಲೇ ತೀವ್ರ ವಿರೋಧ ಕೇಳಿಬಂದಿದೆ. ಶ್ರೀನಿವಾಸನ್ ಅವರನ್ನು ಪದಚ್ಯುತಿಗೊಳಿಸಿದರೆ ಬಿಸಿಸಿಐಗೆ ಕೆಟ್ಟ ಹೆಸರು ಬರುತ್ತದೆ ಎಂದು ಕೆಲ ಪದಾಧಿಕಾರಿಗಳು ವಾದಿಸಿದ್ದಾರೆ. ತಮ್ಮ ವಿರೋಧದ ನಡುವೆಯೂ ಅವರನ್ನು ಪದಚ್ಯುತಿಗೊಳಿಸಿದರೆ ತಾವು ಸಾಮೂಹಿಕ ರಾಜಿನಾಮೆ ನೀಡುವುದಾಗಿ ಸದಸ್ಯರು ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅಧ್ಯಕ್ಷ ಶ್ರೀನಿವಾಸನ್ ಅವರ ರಾಜಿನಾಮೆಗೆ ಸಂಧಾನ ಪ್ರಕ್ರಿಯ ನಡೆಸಲಾಗಿದ್ದು, ಅಜಯ್ ಶಿರ್ಕೆ ಮತ್ತು ಸಂಜಯ್ ಜಗದಾಳೆ ಅವರನ್ನು ಬಿಸಿಸಿಐಗೆ ಮತ್ತೆ ಕರೆತರುವ ವಿಚಾರ ಸಂಧಾನ ಪ್ರಕ್ರಿಯೆಯ ಪ್ರಮುಖ ಅಂಶವಾಗಿದೆ. ಇದೀಗ ಸಂಧಾನ ಯಶಸ್ವಿಗೊಂಡಿದ್ದು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಶ್ರೀನಿವಾಸನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಶ್ರೀನಿವಾಸನ್ ಅವರ ನೂತನ ಉತ್ತರಾಧಿಕಾರಿ ಆಯ್ಕೆಗೂ ಸಭೆಯಲ್ಲಿ ಚಾಲನೆ ದೊರೆತಿದ್ದು, ನೂತನ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಪ್ರಮುಖರ ಹೆಸರು ಬಲವಾಗಿ ಕೇಳಿಬರುತ್ತಿದೆ. ಬಿಸಿಸಿಐನ ಮಾಜಿ ಅಧ್ಯಕ್ಷರಾಗಿರುವ ಜಗಮೋಹನ್ ದಾಲ್ಮಿಯಾ ಮತ್ತು ಶಶಾಂಕ್ ಮನೋಹರ್ ಅವರಲ್ಲಿ ಒಬ್ಬರು ಬಿಸಿಸಿಐ ನೂತನ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಅಂತೆಯೇ ನೂತನ ಪ್ರಧಾನ ಕಾರ್ಯದ್ಯಕ್ಷರಾಗಿ ಅನುರಾಗ್ ಠಾಕೂರ್ ಅವರು ನೇಮಕಗೊಳ್ಳುವ ಸಾಧ್ಯತೆ ಇದೆ.
ನೂತನ ಬಿಸಿಸಿಐ ಅಧ್ಯಕ್ಷರ ನೇಮಕಕ್ಕಾಗಿ ಮುಂದಿನ ವಾರ ಮತ್ತೊಂದು ಸಭೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಿಂದಾಗಿ ಬಿಸಿಸಿಐನಲ್ಲಿ ಬಿರುಗಾಳಿ ಎದ್ದಿದ್ದು, ಕಳೆದ ಶುಕ್ರವಾರ ಅಜಯ್ ಶಿರ್ಕೆ ತಮ್ಮ ಖಜಾಂಚಿ ಸ್ಥಾನಕ್ಕೆ ಮತ್ತು ಸಂಜಯ್ ಜಗದಾಳೆ ಅವರು ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಇದಾದ ಮರುದಿನವೇ ಅಂದರೆ ಶನಿವಾರ ಐಪಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ಶುಕ್ಲಾ ಅವರು ರಾಜಿನಾಮೆ ನೀಡುವ ಮೂಲಕ ಶ್ರೀನಿವಾಸನ್ ರಾಜಿನಾಮೆಗೆ ಒತ್ತಡ ಹೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


