ಈಗಿನ ಸುದ್ದಿ

ಸಭೆಯಲ್ಲಿ 'ಹೈ'ಡ್ರಾಮಾ: ರಾಜಿನಾಮೆಗೆ 'ಶ್ರೀನಿ' ಮತ್ತೆ ನಕಾರ

ಸಭೆಯಲ್ಲಿ 'ಹೈ'ಡ್ರಾಮಾ: ರಾಜಿನಾಮೆಗೆ 'ಶ್ರೀನಿ' ಮತ್ತೆ ನಕಾರ
Published On :

ಚೆನ್ನೈ: ಚೆನ್ನೈನಲ್ಲಿ ನಡೆಯುತ್ತಿರುವ ಬಿಸಿಸಿಐ ಪದಾಧಿಕಾರಿಗಳ ಸಭೆಯಲ್ಲಿ 'ಹೈ' ಡ್ರಾಮವೇ ನಡೆದಿದ್ದು, ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ರಾಜಿನಾಮೆ ನೀಡಲು ಮತ್ತೆ ನಿರಾಕರಿಸಿದ್ದಾರೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಶ್ರೀನಿವಾಸನ್ ಅವರು, ಇಂದಿನ ಸಭೆಯಲ್ಲಿ ಮತ್ತೆ ತಮ್ಮ ಹಳೇ ಚಾಳಿಯನ್ನೇ ಮುಂದುವರೆಸಿದ್ದಾರೆ. ಹೀಗಾಗಿ ಸಭೆಯಲ್ಲಿ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಸಭೆಯಲ್ಲಿ ಗೋವಾ, ಪಂಜಾಬ್ ಮತ್ತು ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದಂತೆ ಯಾವೊಬ್ಬ ಸದಸ್ಯ ಕೂಡ ಶ್ರೀನಿವಾಸನ್ ರಾಜಿನಾಮೆಗೆ ಒತ್ತಡ ಹಾಕಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಆದರೆ ಸಭೆಯಲ್ಲಿ ಶ್ರೀನಿವಾಸನ್ ಮೊಂಡುತನದ ವಿರುದ್ಧ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಪಂಜಾಬ್ ಕ್ರೆಕೆಟ್ ಸಂಸ್ಥೆಯ ಅಧ್ಯಕ್ಷ ಐಎಸ್ ಬಿಂದ್ರಾ ಅವರು, ಶ್ರೀನಿವಾಸನ್ ರಾಜಿನಾಮೆಗೆ ಪಟ್ಟುಹಿಡಿದ್ದಿದ್ದರು. ಅಲ್ಲದೆ ಶ್ರೀನಿ ರಾಜಿನಾಮೆ ನೀಡದಿದ್ದರೆ ತಾವು ಹಾಗೂ ತಮ್ಮ ಬೆಂಬಲಿತ ಸದಸ್ಯರು ಸಾಮೂಹಿಕ ರಾಜಿನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಬಿಸಿಸಿಐನ ಪದಾಧಿಕಾರಿಗಳು ಸಂಧಾನ ಪ್ರಕ್ರಿಯೆಗೆ ಮುಂದಾದರು. ಈ ಸಂಧಾನದ ಪ್ರಕಾರ ಶ್ರೀನಿವಾಸನ್ ಅವರಿಗೆ ತಿಂಗಳಕಾಲ ವಿಶ್ರಾಂತಿ ನೀಡಿ, ಆ ಸಮಯದಲ್ಲಿ ಬಿಸಿಸಿಐನ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮುಂದುವರೆಸುವುದಾಗಿ ತೀರ್ಮಾನಕ್ಕೆ ಬರಲಾಗಿದೆ.

ಅಲ್ಲದೆ ಈ ತಿಂಗಳ ಅವಧಿಯಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ಪೂರ್ಣಗೊಳ್ಳಲಿದೆ ಎಂಬ ಆಶಾವಾದವನ್ನು ಬಿಸಿಸಿಐ ಸದಸ್ಯರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಿಂಗಳ ನಂತರ ಶ್ರೀನಿವಾಸನ್ ಅವರು ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಇದಕ್ಕೂ ಮೊದಲು ಬಿಸಿಸಿಐನ ಹಂಗಾಮಿ ಅಧ್ಯಕ್ಷರನ್ನಾಗಿ ಯಾವ ಸದಸ್ಯರನ್ನು ಆಯ್ಕೆ ಮಾಡಬೇಕೆಂಬ ಗೊಂದಲಕ್ಕೆ ಬಿದ್ದ ಸದಸ್ಯರು, ಕೊನೆಗೆ ಅಜಯ್ ಶಿರ್ಕೆ ಮತ್ತು ಸಂಜಯ್ ಜಗದಾಳೆ ಅವರ ಸಲಹೆ ಮೇರೆಗೆ ಬಿಸಿಸಿಐ ಮತ್ತು ಐಸಿಸಿ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಒಟ್ಟಾರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಬಿಸಿಸಿಐನಲ್ಲಿ ಬಿರುಗಾಳಿ ಎದ್ದಿದ್ದರೂ, ಸಭೆಯಲ್ಲಿ ಮಾತ್ರ ಸದಸ್ಯರು ಹಾಲಿ ಅಧ್ಯಕ್ಷ ಶ್ರೀನಿವಾಸನ್ ಅವರ ವಿರುದ್ಧ ಚಕಾರ ಎತ್ತದೇ ಇರುವುದು ಅಚ್ಚರಿ ಉಂಟುಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.