ಕಾಪ್ಟರ್ ಖರೀದಿ: ತ್ಯಾಗಿ ಸಂಬಂಧಿಕರ ಬ್ಯಾಂಕ್ ಖಾತೆ ಜಪ್ತಿ ರದ್ದು

ನವದೆಹಲಿ: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಜಿ ವಾಯು ಸೇನಾ ಮುಖ್ಯಸ್ಥ ಪಿ.ತ್ಯಾಗಿ ಅವರ ಸಂಬಂಧಿಕರ ಬ್ಯಾಂಕ್ ಖಾತೆಗಳ ಜಪ್ತಿಯನ್ನು ನ್ಯಾಯಾಲಯ ರದ್ದು ಮಾಡಿದೆ.
ಸುಮಾರು 3600 ಕೋಟಿ ರು.ಗಳ ಹೆಲಿಕಾಪ್ಟರ್ ಖರೀದಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ತ್ಯಾಗಿ ಅವರು, ಇಟಲಿ ಮೂಲದ ವಿಮಾನ ತಯಾರಿಕಾ ಸಂಸ್ಥೆ ಅಗಸ್ಟಾ ವೆಸ್ಟ್ಲ್ಯಾಂಡ್ ಸಂಸ್ಥೆಯೊಂದಿಗೆ ನಡೆದಿದ್ದ ಒಪ್ಪಂದದಲ್ಲಿ ಕಮಿಷನ್ ಪಡೆದು ಒಪ್ಪಂದ ಕುದುರಿಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ತ್ಯಾಗಿ ಮತ್ತು ಅವರ ಕುಟುಂಬ ಸದಸ್ಯರ ಎಲ್ಲ ರೀತಿಯ ಬ್ಯಾಂಕ್ ಖಾತೆಗಳನ್ನು ಸಿಬಿಐ ಅಧಿಕಾರಿಗಳು ಜಪ್ತಿ ಮಾಡಿದ್ದರು.
ಕಾಪ್ಟರ್ ಖರೀದಿ ಹಗರಣದ ವಿಚಾರಣೆಯನ್ನು ಇಂದು ನಡೆಸಿದ ವಿಶೇಷ ನ್ಯಾ. ರವೀಂದರ್ ಖೌರ್ ಅವರು, ಷರತ್ತಿನ ಮೇಲೆ ಬ್ಯಾಂಕ್ ಖಾತೆಗಳ ಮೇಲಿನ ಜಪ್ತಿಯನ್ನು ತೆರವುಗೊಳಿಸಿದ್ದಾರೆ. ಪಿ.ತ್ಯಾಗಿ ಅವರ ಕುಟುಂಬ ಸದಸ್ಯರಾದ ಅನುರಾಗ್ ತ್ಯಾಗಿ ಮತ್ತು ವಂದನಾ ತ್ಯಾಗಿ ಅವರ ಬ್ಯಾಂಕ್ ಖಾತೆಗಳ ಜಪ್ತಿ ಆದೇಶವನ್ನು ನ್ಯಾಯಾಲಯ ಹಿಂಪಡೆದುಕೊಂಡಿದೆ. ಅಲ್ಲದೆ ನ್ಯಾಯಾಲಯ ಈ ಇಬ್ಬರು ಸದಸ್ಯರು ಖಾತೆ ಹೊಂದಿರುವ ಬ್ಯಾಂಕ್ನ ಮ್ಯಾನೇಜರ್ಗಳಿಗೆ ಸೂಚನೆ ರವಾನಿಸಿದ್ದು, ಅನುರಾಗ್ ತ್ಯಾಗಿ ಮತ್ತು ವಂದನಾ ತ್ಯಾಗಿ ಅವರ ಖಾತೆ ಸಂಖ್ಯೆಯನ್ನು ಬ್ಯಾಂಕ್ ಅಧಿಕಾರಿಗಳಿಗೆ ರವಾನಿಸಿದೆ. ಈ ಇಬ್ಬರು ಸದಸ್ಯರ ವಿವಿಧ ಬ್ಯಾಂಕುಗಳ ಖಾತೆಯಲ್ಲಿ ಸುಮಾರು 19 ಲಕ್ಷ ನಗದು ಮತ್ತು 2 ಲಕ್ಷ ಮೌಲ್ಯದ ಬಾಂಡ್ಗಳು ಪತ್ತೆಯಾಗಿದ್ದವು ಎಂದು ಸಿಬಿಐ ಮೂಲಗಳು ತಿಳಿಸಿವೆ.
ದೇಶದ ವಿವಿಐಪಿ ನಾಯಕರು ಪ್ರಯಾಣಿಸಲು 12 ಹೆಲಿಕಾಪ್ಟರ್ಗಳನ್ನು ಖರೀದಿಸಲು ಭಾರತೀಯ ವಾಯುಸೇನೆ ಮುಂದಾಗಿತ್ತು. ಇದಕ್ಕಾಗಿ ಇಟಲಿ ಮೂಲದ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯೊಂದಿಗೆ ಸುಮಾರು 3600 ಕೋಟಿ ರು.ಗಳ ಒಪ್ಪಂದಕ್ಕೆ ಭಾರತ ಸಹಿ ಹಾಕಿತ್ತು. ಆದರೆ ಇಟಲಿ ತನಿಖಾಧಿಕಾರಿಗಳು ಹೊರಗೆಡವಿದ ಸ್ಪೋಟಕ ಮಾಹಿತಿಯಿಂದಾಗಿ, ಮಾಜಿ ಸೇನಾಧ್ಯಕ್ಷ ತ್ಯಾಗಿ ಅವರು ಈ ಒಪ್ಪಂದದಲ್ಲಿ ಲಾಭ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ವಿವಿಧ ಏಜೆಂಟ್ಗಳನ್ನು ಸಂಪರ್ಕಿಸಿದ್ದ ತ್ಯಾಗಿ ಅವರು, ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯೊಂದಿಗೆ ಒಪ್ಪಂದ ಕುದುರಿಸಲು ಕಮಿಷನ್ ಪಡೆದಿರುವ ಅಂಶವನ್ನು ಸಿಬಿಐ ಅಧಿಕಾರಿಗಳು ಹೊರಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


