ಈಗಿನ ಸುದ್ದಿ

ಎನ್‌ಸಿಟಿಸಿಗೆ ಅನಿಯಂತ್ರಿತ ಅಧಿಕಾರ ಬೇಡ: ಸಿದ್ದರಾಮಯ್ಯ

ಎನ್‌ಸಿಟಿಸಿಗೆ ಅನಿಯಂತ್ರಿತ ಅಧಿಕಾರ ಬೇಡ: ಸಿದ್ದರಾಮಯ್ಯ
Published On :

ನವದೆಹಲಿ: ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ)ಕ್ಕೆ ಅನಿಯಂತ್ರಿತ ಅಧಿಕಾರವನ್ನು ಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಆಂತರಿಕ ಭದ್ರತಾ ಸಭೆಯಲ್ಲಿ ಪಾಲ್ಗೊಂಡಿರುವ ಅವರು, ರಾಜ್ಯದಲ್ಲಿ ನಕ್ಸಲೀಯರ ಹಾವಳಿ ಜೋರಾಗಿದ್ದು, ರಾಜ್ಯದ ಶಾಂತಿ ಸುವ್ಯವಸ್ಥೆಗೆ ಭಂಗತರಲು ಅವರು ಪ್ರಯತ್ನಿಸುತ್ತಿರುತ್ತಾರೆ. ಕರ್ನಾಟಕ ರಾಜ್ಯದ ಪೊಲೀಸ್ ಅಧಿಕಾರಿಗಳು ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆ ಕುರಿತಂತೆ ತಮ್ಮದೇ ಆದ ರೀತಿಯಲ್ಲಿ ಮಾಹಿತಿ ಕಲೆಹಾಕುತ್ತಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕೆ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆದರೂ ಕೂಡ ಆಂತರಿಕ ಭದ್ರತಾ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಭದ್ರತಾ ವಿಚಾರದಲ್ಲಿ ಸಮನ್ವಯ ಸಾಧಿಸಬೇಕಿದೆ. ಕೆಲವೊಮ್ಮೆ ನೆರೆ ರಾಜ್ಯಗಳು ಮತ್ತು ನೆರೆ ದೇಶಗಳೂ ಕೂಡ ಇದಕ್ಕೆ ಸಹಕರಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಎನ್‌ಸಿಟಿಸಿ ರಚನೆಗೂ ಮೊದಲು ಕೆಲ ಭದ್ರತಾ ಎಚ್ಚರಿಕೆಗಳನ್ನು ವಹಿಸಬೇಕಿದೆ. ಹೀಗಾಗಿ ಎನ್‌ಸಿಟಿಸಿ ಮೇಲೆ ರಾಜ್ಯ ಸರ್ಕಾರಕ್ಕೂ ಕೆಲಹಂತದ ನಿಯಂತ್ರಣ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಇತರೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹಕಾರ್ಯದರ್ಶಿಗಳು ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ ಕೇಂದ್ರದ ಎನ್‌ಸಿಟಿಸಿ ಸ್ಥಾಪನೆಯಲ್ಲಿನ ಮೂಲತತ್ವಗಳನ್ನು ವಿರೋಧಿಸಿದ ಅವರು, ಎನ್‌ಸಿಟಿಸಿ ನಿಯಂತ್ರಣದಲ್ಲಿ ಆಯಾ ರಾಜ್ಯಗಳಿಗೂ ಪಾಲು ಇರಬೇಕು ಎಂದು ಒಕ್ಕೋರಲಿನಿಂದ ಆಗ್ರಹಿಸಿದರು.

ಒಟ್ಟಾರೆ ಕೇಂದ್ರ ಸರ್ಕಾರದ ಉದ್ದೇಶಿತ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದ ರಾಜ್ಯ ಸರ್ಕಾರಗಳು, ಇಂದೂ ಕೂಡ ತಮ್ಮ ವಿರೋಧವನ್ನು ಮುಂದುವರೆಸಿದವು. ಎನ್‌ಸಿಟಿಸಿಗೆ ಪರಮಾಧಿಕಾರ ನೀಡಬಾರದು ಎಂಬ ತಮ್ಮ ನಿರ್ಧಾರಕ್ಕೆ ರಾಜ್ಯ ಸರ್ಕಾರಗಳು ಬದ್ಧವಾಗಿದ್ದವು. ಕುತೂಹಲಕರ ಅಂಶವೆಂದರೆ ಕಾಂಗ್ರೆಸ್ ಪಕ್ಷದ ಆಡಳಿತವಿರುವ ರಾಜ್ಯಗಳೂ ಕೂಡ ಎನ್‌ಸಿಟಿಸಿಗೆ ಪರಮಾಧಿಕಾರ ನೀಡಬಾರದು ಎಂಬ ಅಭಿಪ್ರಾಯಕ್ಕೆ ದನಿಗೂಡಿಸಿದವು.

ಎನ್‌ಸಿಟಿಸಿ ಸ್ಥಾಪನೆಯಾಗದಿದ್ದರೆ ಭಾರಿ ದಂಡ ತೆರಬೇಕಾಗುತ್ತದೆ: ಚಿದಂಬರಂ
ಈ ನಡುವೆ ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಮತ್ತು ಮಾಜಿ ಗೃಹ ಸಚಿವ ಪಿ.ಚಿದಬರಂ ಅವರು, ರಾಷ್ಟ್ರೀಯ ಭಯೋತ್ಪಾದನಾ ಕೇಂದ್ರ ಸ್ಥಾಪನೆಯಾಗದಿದ್ದರೆ ದೇಶ ಮುಂದೆ ಭಾರಿ ದಂಡ ತೆರಬೇಕಾಗುತ್ತದೆ. ದೇಶದ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಸದಾ ಹವಣಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಎನ್‌ಸಿಟಿಸಿ ಸ್ಥಾಪನೆಗೆ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಅಲ್ಲದೆ ಎನ್‌ಸಿಟಿಸಿಗೆ ಕೇವಲ ಎನ್‌ಡಿಎ ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯಗಳು ಮಾತ್ರ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಭಯೋತ್ಪಾದನಾ ನಿಗ್ರಹ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸೂಚಿಸಿವೆ ಎಂದು ಚಿದಂಬರಂ ಹೇಳಿದರು.

'ಭಯೋತ್ಪಾದನೆ ಎಂಬುದು ದೇಶಕ್ಕೆ ಬಹುದೊಡ್ಡ ಅಪಾಯವಾಗಿದ್ದು, ಅದನ್ನು ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು. ಆ ಮೂಲಕ ಇಂದು ಬೆಳಗ್ಗೆ 'ಕೇಂದ್ರಕ್ಕೆ ಸ್ಥಳೀಯ ಭದ್ರತೆಯ ಚಿಂತೆಯೇ ಹೊರತು, ರಾಷ್ಟ್ರೀಯ ಭದ್ರತೆ ಕುರಿತು ಅದು ಚಿಂತಿಸಿಯೇ ಇಲ್ಲ' ಎಂಬ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.