ಕಾಪ್ಟರ್ ಖರೀದಿ: ಸಹಾಯ ಕೋರಿದ ಅಗಸ್ಟಾ ವೆಸ್ಟ್ ಲ್ಯಾಂಡ್

ನವದೆಹಲಿ: ವಿವಾದಕ್ಕೀಡಾಗಿರುವ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದ ಪರಿಷ್ಕರಣೆಗಾಗಿ ಇಟಲಿ ಮೂಲದ ವಿಮಾನಯಾನ ತಯಾರಿಕಾ ಸಂಸ್ಥೆ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಕೇಂದ್ರ ವಿದೇಶಾಂಗ ಇಲಾಖೆ ಮತ್ತು ವಿತ್ತ ಇಲಾಖೆಯ ಸಹಾಯ ಕೋರಿದೆ.
ಈ ಬಗ್ಗೆ ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯು ಕೇಂದ್ರದ ಉಭಯ ಇಲಾಖೆಗಳಿಗೆ ಸರಣಿ ಪತ್ರಗಳನ್ನು ರವಾನಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. 2010ರ ಜನವರಿಯಲ್ಲಿ ನಡೆದಿದ್ದ ಈ ಒಪ್ಪಂದದಲ್ಲಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣವನ್ನು ಇಟಲಿಯ ತನಿಖಾ ಸಂಸ್ಥೆಗಳು ಬಯಲಿಗೆಳೆದಿದ್ದವು. ಇದಾದ ನಂತರ ಭಾರತದ ರಕ್ಷಣಾ ಇಲಾಖೆಯು ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ಅಮಾನತ್ತಿನಲ್ಲಿಟ್ಟಿತ್ತು. ಆದರೆ ಇದೀಗ ಮತ್ತೆ ಒಪ್ಪಂದವನ್ನು ಮುಂದುವರೆಸುವಂತೆ ಕೋರಿರುವ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಒಪ್ಪಂದದ ಬಾಕಿ ಕಂತಿನ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ವಿತ್ತ ಇಲಾಖೆಯನ್ನು ಕೋರಿದೆ.
ಸ್ವತಃ 'ಅಗಸ್ಟಾ' ಸಂಸ್ಥೆಯ ಇಟಲಿ ಶಾಖೆಯ ನಿರ್ವಾಹಕ ನಿರ್ದೇಶಕರಾದ ಜೆಫ್ ಹೂನ್ ಅವರು ಕಳೆದ ಏಪ್ರಿಲ್ 16 ರಂದು ಕೇಂದ್ರಸರ್ಕಾರಕ್ಕೆ ಪತ್ರ ಬರೆದಿದ್ದು, ಒಪ್ಪಂದದ ಕುರಿತು ತನ್ನ ನಡೆಯನ್ನು ತಿಳಿಸುವಂತೆ ಕೇಳಿಕೊಂಡಿದ್ದಾರೆ. ಪತ್ರದಲ್ಲಿ ಒಪ್ಪಂದವನ್ನು ಇತ್ಯರ್ಥ ಪಡಿಸುವಂತೆ ಕೋರಿರುವ ಅವರು, ಬಾಕಿ ಉಳಿದಿರುವ ತನ್ನ ಪಾಲಿನ ಹಣವನ್ನು ಶೀಘ್ರ ಪಾವತಿ ಮಾಡುವಂತೆ ಮತ್ತು ಒಪ್ಪಂದವನ್ನು ಮುಂದುವೆರೆಸುವಂತೆ ಕೇಳಿಕೊಂಡಿದ್ದಾರೆ.
ವಿವಾದಕ್ಕೆ ಕಾರಣವಾಗಿರುವ ಬಹುಕೋಟಿ ಮೌಲ್ಯದ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣವನ್ನು ಪ್ರಸ್ತುತ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ವಾಯಸೇನೆಯ ಅಂದಿನ ಮುಖ್ಯಸ್ಥ ಪಿ.ತ್ಯಾಗಿ ಅವರ ಪಾತ್ರವಿರುವುದು ತನಿಖೆಯಿಂದ ಸ್ಪಷ್ಟವಾಗಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಭಾರತೀಯ ರಕ್ಷಣಾ ಇಲಾಖೆ ಈ ಒಪ್ಪಂದವನ್ನು ಅಮಾನತ್ತಿಲ್ಲಿಟ್ಟು, ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಗೆ ವಿವರ ಕೋರಿ ಷೋಕಾಸ್ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ ಒಪ್ಪಂದವನ್ನು ತಾನೇಕೆ ರದ್ದು ಮಾಡಬಾರದು? ಎಂದು ಸಂಸ್ಥೆಯನ್ನು ಪ್ರಶ್ನಿಸಿತ್ತು.
ಇದೀಗ ಮತ್ತೆ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯು ಒಪ್ಪಂದವನ್ನು ಮುಂದುವರೆಸಲು ಕೇಂದ್ರ ವಿತ್ತ ಮತ್ತು ವಿದೇಶಾಂಗ ಇಲಾಖೆಗೆ ಮನವಿ ಮಾಡಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


