ಕೆಪಿಎಸ್ಸಿ ನೇಮಕಾತಿಗೆ ಮಾನ್ಯತೆ ನೀಡುವುದಿಲ್ಲ: ಸಿಎಂ

ಬೆಂಗಳೂರು: ಭ್ರಷ್ಟಾಚಾರದಿಂದ ನಡೆದಿದೆ ಎನ್ನಲಾಗುತ್ತಿರುವ ಕೆಪಿಎಸ್ಸಿ ನೇಮಕಾತಿ ಪಟ್ಟಿಗೆ ರಾಜ್ಯಸರ್ಕಾರ ಮಾನ್ಯತೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ನೇಮಕಾತಿ ಅಕ್ರಮದ ಕುರಿತು ಶೀಘ್ರದಲ್ಲಿಯೇ ತನಿಖೆ ನಡೆಸಲಾಗುವುದು. ತನಿಖೆ ಪೂರ್ಣಗೊಂಡು ವರದಿ ತಮ್ಮ ಕೈ ಸೇರುವವರೆಗೂ ನೇಮಕಾತಿ ಪ್ರಕ್ರಿಯೆಗೆ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿದರು. ಅಲ್ಲದೆ ಇದೀಗ ಪೂರ್ಣಗೊಂಡಿರುವ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಪರಿಷತ್ನಲ್ಲಿ ಪ್ರತಿಧ್ವನಿಸಿದ ಕೆಪಿಎಸ್ಸಿ ಕರ್ಮಕಾಂಡ
ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಕಲಾಪದಲ್ಲಿ ಕೆಪಿಎಸ್ಸಿ ಭ್ರಷ್ಟಾಚಾರದ ವಿಷಯ ಚರ್ಚೆಯಾಗುತ್ತಿದ್ದು, ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿವೆ.
ಇಂದಿನ ಸಭೆಯಲ್ಲಿ ಕೆಪಿಎಸ್ಸಿ ಅಕ್ರಮದ ಕುರಿತು ವಿಷಯ ಪ್ರಸ್ತಾಪಿಸಿದ ಜೆಡಿಎಸ್ನ ಎಂ.ಸಿ.ನಾಣಯ್ಯ ಅವರು ಭ್ರಷ್ಟ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ನಾಣಯ್ಯ ಅವರ ಆಗ್ರಹಕ್ಕೆ ಬೆಂಬಲ ನೀಡಿದ ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಭ್ರಷ್ಟ ಅಧಿಕಾರಿಗಳು ತೊಡಕಾಗಿದ್ದಾರೆ. ಇಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ನಲ್ಲಿ ಕೆಲಕಾಲ ಗೊಂದಲಮಯ ವಾತಾವರಣ ಉಂಟಾಗಿತ್ತು. ಸ್ಪೀಕರ್ ಅವರ ಮಧ್ಯಪ್ರವೇಶದೊಂದಿಗೆ ವಾತಾವರಣ ತಿಳಿಗೊಂಡಿತು.
ಇತ್ತೀಚೆಗೆ ನಡೆದ ಕೆಪಿಎಸ್ಸಿ ನೇಮಕಾತಿ ಸಂದರ್ಭದಲ್ಲಿ ಸಂದರ್ಶನಾಧಿಕಾರಿಗಳು ಅಭ್ಯರ್ಥಿಗಳಲ್ಲಿ ಲಕ್ಷಾಂತರ ರು. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಅಲ್ಲದೆ ಅಷ್ಟು ಮೊತ್ತದ ಹಣ ಪಾವತಿಸಲಾಗದ ಅಭ್ಯರ್ಥಿಗಳಿಗೆ ತಾವೇ ಮದುವೆ ಮಾಡಿಸಿ ಆ ಮದುವೆಯಲ್ಲಿ ಬಂದ ವರದಕ್ಷಿಣೆ ಹಣವನ್ನು ತಮಗೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದು ಖಾಸಗಿ ಸುದ್ದಿವಾಹಿನಿಯ ರಹಸ್ಯ ಕಾರ್ಯಾಚರಣೆಯ ಮೂಲಕ ಬೆಳಕಿಗೆ ಬಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


