ಈಗಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿ: ಭಾರತ 7ವಿಕೆಟ್ ನಷ್ಟಕ್ಕೆ 331 ರನ್

ಚಾಂಪಿಯನ್ಸ್ ಟ್ರೋಫಿ: ಭಾರತ 7ವಿಕೆಟ್ ನಷ್ಟಕ್ಕೆ 331 ರನ್
Published On :

ಲಂಡನ್: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ ಬೃಹತ್ ಮೊತ್ತ ಪೇರಿಸಿದ್ದು, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 331 ರನ್ ಗಳಿಸಿದೆ. ದ.ಆಫ್ರಿಕಾ ತಂಡಕ್ಕೆ ಗೆಲ್ಲಲು 332 ರನ್‌ಗಳ ಬೃಹತ್ ಗುರಿ ನೀಡಿದೆ.

ಇಂಗ್ಲೆಂಡ್‌ನ ಕಾರ್ಡಿಫ್‌ನಲ್ಲಿ ನಡೆಯುತ್ತಿರುವ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ತಂಡ ಭಾರತ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗ್ ನಡೆಸಿದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಶತಕದ ಜೊತೆಯಾಟವಾಡಿದ ಈ ಜೋಡಿ 127 ರನ್‌ಗಳನ್ನು ಕಲೆಹಾಕಿತು.

22ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಅವರು ಮೆಕ್‌ಲಾರೆನ್ ಬೌಲಿಂಗ್‌ನಲ್ಲಿ ಪೀಟರಸೆನ್‌ಗೆ ಕ್ಯಾಚ್ ನೀಡಿ ಔಟಾದರು. ಅನಂತರ ಬಂದ ವಿರಾಟ್ ಕೊಹ್ಲಿ ತಾಳ್ಮೆಯ ಆಟವಾಡಿ 31 ರನ್ ಗಳಿಸಿ ಔಟಾದರು. ಅಭ್ಯಾಸ ಪಂದ್ಯಗಳಲ್ಲಿ ಮಿಂಚಿದ್ದ ದಿನೇಶ್ ಕಾರ್ತಿಕ್ ಕೇವಲ 14 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಆಗಮಿಸಿದ ನಾಯತ ಧೋನಿ ಕೂಡ 27 ರನ್‌ಗಳಿಗೆ ನಿರ್ಗಮಿಸಿದರು.

ಈ ನಡುವೆ ಭರ್ಜರಿಯಾಗಿ ಆಟವಾಡುತ್ತಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಚೊಚ್ಚಲ ಶತಕವನ್ನು ದಾಖಲಿಸಿ ಸಂಭ್ರಮಿಸಿದರು. ಒಟ್ಟು 94 ಎಸೆತಗಳನ್ನು ಎದುರಿಸಿದ ಅವರು 114 ರನ್‌ಗಳನ್ನು ಗಳಿಸಿ ಡುಮಿನಿ ಬೌಲಿಂಗ್‌ನಲ್ಲಿ ಔಟಾದರು. ಸುರೇಶ್ ರೈನಾ ಕೂಡ ಕೇವಲ 9 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಸಮಯೋಚಿತ ಆಟದ ನೆರವಿನಿಂದ ಭಾರತ ತಂಡ 300 ರನ್ ದಾಟಿತು. ಕೊನೆಯ ಓವರ್‌ನಲ್ಲಿ ಇಲ್ಲದ ರನ್ ಕದಿಯಲು ಹೋದ ಜಡೇಜಾ ರನ್‌ಔಟ್‌ಗೆ ಬಲಿಯಾದರು.

ಅನಂತರ ಬಂದ ಭಾರತ ತಂಡದ ಬಾಲಂಗೋಚಿಗಳಾದ ಆರ್.ಅಶ್ವಿನ್ (10 ರನ್) ಮತ್ತು ಭುವನೇಶ್ವರ್ ಕುಮಾರ್(0 ರನ್) ಇನ್ನಿಂಗ್ಸ್ ಔಪಚಾರಿಕತೆಯನ್ನು ಮುಗಿಸಿದರು. ದ.ಆಫ್ರಿಕಾ ತಂಡದ ಪರ ಪೀಟರ್‌ಸನ್ 70 ರನ್ ನೀಡಿದರಾದರೂ 3 ಪ್ರಮುಖ ವಿಕೆಟ್ ಪಡೆಯುವ ಮೂಲಕ ಉತ್ತಮ ಬೌಲರ್ ಎನಿಸಿಕೊಂಡರು. ಉಳಿದಂತೆ ಟ್ಸೊಟ್ಸೋಬೆ 2ವಿಕೆಟ್ ಮತ್ತು ಸಾಂದರ್ಭಿಕ ಬೌಲರ್ ಜೆಪಿ ಡುಮಿನಿ 1 ವಿಕೆಟ್ ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.