ಸ್ಪಾಟ್ಫಿಕ್ಸಿಂಗ್: ಐಪಿಎಲ್ನಿಂದ ಆರ್ಆರ್ ಹೊರಕ್ಕೆ?

ಕೋಲ್ಕತಾ: ಐಪಿಎಲ್ ಸರಣಿಯಲ್ಲಿ ಬೆಟ್ಟಿಂಗ್ ನಡೆಸಿದ ಪ್ರಕರಣದಿಂದಾಗಿ ರಾಜ್ ಕುಂದ್ರಾ ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ರಾಜಸ್ತಾನ ರಾಯಲ್ಸ್ ತಂಡವನ್ನು ಬಿಸಿಸಿಐ ಹೊರಹಾಕುವ ಸಾಧ್ಯತೆಗಳಿವೆ.
ನಿನ್ನೆಯ ಪೊಲೀಸ್ ವಿಚಾರಣೆಯಲ್ಲಿ ರಾಜಸ್ತಾನ ತಂಡದ ಮಾಲೀಕರಾಗಿರುವ ರಾಜ್ ಕುಂದ್ರಾ ಅವರು ಐಪಿಎಲ್ ಸರಣಿ ವೇಳೆ ತಮ್ಮ ತಂಡದ ಪರವಾಗಿ ತಾವು ಬೆಟ್ಟಿಂಗ್ ನಡೆಸಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಅಲ್ಲದೆ ರಾಜ್ ಪತ್ನಿ ಶಿಲ್ಪಾ ಶೆಟ್ಟಿ ಕೂಡ ಉಮೇಶ್ ಯಾದವ್ ಎಂಬುವವರ ಮೂಲಕ ಬೆಟ್ಟಿಂಗ್ ನಡೆಸಿದ್ದರ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಎಲ್ಲ ಬೆಳವಣಿಗೆಗಳ ಹಿನ್ನಲೆಯಲ್ಲಿ ಬಿಸಿಸಿಐ ರಾಜಸ್ತಾನ ರಾಯಲ್ಸ್ ತಂಡವನ್ನು ಮುಂಬರುವ ಐಪಿಎಲ್ ಸರಣಿಯಿಂದ ಹೊರಹಾಕುವ ಸಾಧ್ಯತೆಗಳಿವೆ. ಅಲ್ಲದೆ ಇದಕ್ಕೆ ಪೂರಕವೆಂಬಂತೆ ಇಂದು ಬಿಸಿಸಿಐನ ನೂತನ ಕಾರ್ಯಕಾರಿ ಸಮಿತಿ ಇಂದು ತುರ್ತು ಸಭೆ ಕರೆದಿದ್ದು, ಸಭೆಯಲ್ಲಿ ರಾಜ್ ಕುಂದ್ರಾ ಅವರ ಬೆಟ್ಟಿಂಗ್ ಕುರಿತ ತಪ್ಪೊಪ್ಪಿಗೆ ಹೇಳಿಕೆ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಅಲ್ಲದೆ ಇದೇ ಜೂನ್ 10 ರಂದು ಬಿಸಿಸಿಐ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಅಂದು ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ತಾನ ರಾಯಲ್ಸ್ ತಂಡದ ಭವಿಷ್ಯ ನಿರ್ಧಾರವಾಗಲಿದೆ.
ರಾಜ್ ಕುಂದ್ರಾ ಅವರ ತಪ್ಪೊಪ್ಪಿಗೆ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಸಿಸಿಐನ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ, ರಾಜಸ್ತಾನ ರಾಯಲ್ಸ್ ತಂಡದ ಪ್ರಸಕ್ತ ಬೆಳವಣಿಗೆಗಳನ್ನು ತಾವು ಗಮನಿಸುತ್ತಿದ್ದು, ಚಾಂಪಿಯನ್ಸ್ ಟ್ರೋಫಿ ಸರಣಿಯ ಬಳಿಕ ನಾವು ಈ ಬಗ್ಗೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಅವರೊಂದಿಗೆ ಚರ್ಚಿಸುತ್ತೇವೆ. ಅಲ್ಲದೆ ನಾವು ಯಾರ ಮುಲಾಜಿಗೂ ಒಳಗಾಗದೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಚೆನ್ನೈ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಅವರ ವಿರುದ್ಧ ಆರೋಪಗಳ ಕುರಿತು ಮಾತನಾಡಿದ ಅವರು, ಪ್ರಕರಣದ ಕುರಿತು ತನಿಖೆ ನಡೆಸಲು ನಾವು ಈಗಾಗಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸಮಿತಿಯ ವರದಿಯ ಮೇರೆಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಅಲ್ಲದೆ ತನಿಖಾ ವರದಿಯ ಸಲ್ಲಿಕೆಗೆ ಸಮಿತಿಗೆ ಯಾವುದೇ ರೀತಿಯ ಸಮಯಾವಕಾಶ ನೀಡಿಲ್ಲ ಎಂದು ದಾಲ್ಮಿಯಾ ಸ್ಪಷ್ಟಪಡಿಸಿದರು.
ಒಟ್ಟಾರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಭವಿಷ್ಯ ಇದೀಗ ತೂಗುಯ್ಯಾಲೆಯಲ್ಲಿದೆ. ಇದೇ ಪ್ರಕರಣದಿಂದಾಗಿ ಭಾರತ ತಂಡದ ಮಾಜಿ ನಾಯಕ ಮತ್ತು ರಾಜಸ್ತಾನ ತಂಡದ ನಾಯಕರಾಗಿರುವ ರಾಹುಲ್ ದ್ರಾವಿಡ್ ಅವರನ್ನು ಕೂಡ ಅನುಮಾನದಿಂದ ನೋಡುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


