ಈಗಿನ ಸುದ್ದಿ

ವಿಚ್ಛೇದನಕ್ಕಾಗಿ ರಷ್ಯಾ ಅಧ್ಯಕ್ಷ ಪುಟಿನ್, ಪತ್ನಿ ಲಾಡ್ಮಿಲಾ ಅರ್ಜಿ

ವಿಚ್ಛೇದನಕ್ಕಾಗಿ ರಷ್ಯಾ ಅಧ್ಯಕ್ಷ ಪುಟಿನ್, ಪತ್ನಿ ಲಾಡ್ಮಿಲಾ ಅರ್ಜಿ
Published On :

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪತ್ನಿ ಲಾಡ್ಮಿಲಾ ಅವರು ಪರಸ್ಪರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ.

ರಷ್ಯಾದ ಅಧ್ಯಕ್ಷರಾಗಿರುವ ವ್ಲಾಡಿಮಿರ್ ಪುಟಿನ್ ಮತ್ತು ಪತ್ನಿ ಲಾಡ್ಮಿಲಾ ಅವರು ಪರಸ್ಪರ ತಮ್ಮ 30 ವರ್ಷದ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ನಿರ್ಧರಿಸಿದ್ದಾರೆ. ರಷ್ಯಾದ ರಾಷ್ಟ್ರೀಯ ಸುದ್ದಿ ವಾಹಿನಿಗೆ ಪುಟಿನ್ ದಂಪತಿಗಳು ನೀಡಿರುವ ಜಂಟಿ ಸಂದರ್ಶನದಲ್ಲಿ ಈ ಅಂಶ ಬಹಿರಂಗಗೊಂಡಿದ್ದು, ರಷ್ಯಾದಾದ್ಯಂತ ಈ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಆದರೆ ಸಂದರ್ಶನದ ವೇಳೆ ವಿಚ್ಛೇದನ ಕುರಿತು ದಂಪತಿಗಳು ನೀಡಿರುವ ಕಾರಣ ಕುತೂಹಲಕರವಾಗಿದ್ದು, ಪುಟಿನ್ ಅಧ್ಯಕ್ಷೀಯ ಕಾರ್ಯಗಳೇ ಲಾಡ್ಮಿಲಾ ವಿಚ್ಛೇದನ ಪಡೆಯಲು ಕಾರಣವಂತೆ. ರಷ್ಯಾದ ಅಧ್ಯರಾಗಿರುವ ಪುಟಿನ್ ಸದಾ ಕಾಲ ಸಾರ್ವಜನಿಕವಾಗಿರುತ್ತಾರೆ. ಇದರಿಂದ ವೈಯುಕ್ತಿಕ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ಲಾಡ್ಮಿಲಾ ಆರೋಪಿಸಿದ್ದಾರೆ.

'ನಾವು ಪರಸ್ಪರ ಚರ್ಚಿಸಿಯೇ ವಿಚ್ಛೇದನ ಪಡೆಯುತ್ತಿದ್ದು, ಪುಟಿನ್ ಅವರ ಅಧ್ಯಕ್ಷೀಯ ಕೆಲಸಗಳು ನಮ್ಮ ವೈಯುಕ್ತಿಕ ಜೀವನಕ್ಕೆ ತೊಡಕಾಗುತ್ತಿವೆ. ಅಲ್ಲದೆ ನನಗೆ ವಿಮಾನ ಪ್ರಯಾಣ ತೀವ್ರ ಬೇಸರ ತರಿಸುತ್ತಿದೆ. ಕಳೆದ ಒಂಭತ್ತು ವರ್ಷಗಳಿಂದ ದೇಶದ ಪ್ರಥಮ ಮಹಿಳೆಯ ಅಂತಸ್ತು ನನಗೆ ಕಷ್ಟಕರವಾಗುತ್ತಿದೆ. ನನ್ನ ಮತ್ತು ಪುಟಿನ್ ಅವರ ಈ ನಿರ್ಧಾರ ವೈಯುಕ್ತಿಕವಾದದ್ದಾಗಿದೆ ಎಂದು ಲಾಡ್ಮಿಲಾ ತಿಳಿಸಿದ್ದಾರೆ.

ವಿಚ್ಛೇದನ ಕುರಿತು ಪ್ರತಿಕ್ರಿಯಿಸಿರುವ ಅಧ್ಯಕ್ಷ ಪುಟಿನ್ ಅವರು, ನನ್ನ ಎಲ್ಲ ಕಾರ್ಯಗಳು ಸಾರ್ವಜನಿಕರೊಂದಿಗೆ ಬೆಸೆದುಕೊಂಡಿದೆ. ನಮ್ಮ ಈ ನಿರ್ಧಾರ ಕೆಲವರಿಗೆ ಬೇಸರ ತರಿಸಬಹುದು ಆದರೆ ನಾವು ಪರಸ್ಪರ ಹೊಂದಿಕೊಳ್ಳಲಾಗುತ್ತಿಲ್ಲ. ಹೀಗಾಗಿ ನಾವು ಪರಸ್ಪರ ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಹೇಳಿದರು.

ಒಟ್ಟಾರೆ ರಷ್ಯಾ ದೇಶ ಕಂಡ ಅತ್ಯಂತ ಯಶಸ್ವಿ ಅಧ್ಯಕ್ಷರೆಂಬ ಖ್ಯಾತಿ ಪಡೆದ ಪುಟಿನ್ ತಮ್ಮ ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗುವುದರಲ್ಲಿ ವಿಫಲರಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಮಾಧ್ಯಮಗಳು ಹೇಳುತ್ತಿವೆ. 2012ರ ಮೇ ತಿಂಗಳಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಇದಾದ ನಂತರ ಜೊತೆಯಾಗಿ ಕಾಣಿಸಿಕೊಂಡಿರಲ್ಲಿಲ್ಲ. ಸತತ 30 ವರ್ಷಗಳ ದಾಂಪತ್ಯ ನಡೆಸಿದ್ದ ಈ ಜೋಡಿಗೆ ಬೆಳೆದು ನಿಂತ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಪುಟಿನ್ ದಂಪತಿಯ ವಿಚ್ಛೇದನ ಮಾಧ್ಯಮಗಳಲ್ಲಿ ವರದಿಯಾಗಿದೆಯಾದರೂ ಅಧಿಕೃತವಾಗಿ ಅವರು ವಿಚ್ಛೇದನ ಪಡೆದಿಲ್ಲ. ವಿಚ್ಛೇದನಕ್ಕಾಗಿ ಅರ್ಜಿಸಲ್ಲಿಕೆಯಾಗಿದೆ. ಆದರೆ ನ್ಯಾಯಾಲಯ ಯಾವಾಗ ವಿಚ್ಛೇದನ ನೀಡುತ್ತದೆಯೋ ತಿಳಿದಿಲ್ಲ ಎಂದು ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.