ಈಗಿನ ಸುದ್ದಿ

ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್‌ಗೆ ಸಿಬಿಐ ಸಮನ್ಸ್

ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್‌ಗೆ ಸಿಬಿಐ ಸಮನ್ಸ್
Published On :

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಉಕ್ಕು ಸಂಸ್ಥೆಯ ಮಾಲೀಕ ಮತ್ತು ಕಾಂಗ್ರೆಸ್ ಸಂಸದ ನವೀನ್ ಜಿಂದಾಲ್ ಅವರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ.

ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ನವೀನ್ ಜಿಂದಾಲ್ ಅವರು ಪ್ರಮುಖ ಆರೋಪಿಯಾಗಿದ್ದು, ನಿನ್ನೆಯಷ್ಟೇ ನವೀನ್ ಜಿಂದಾಲ್ ಮತ್ತು ಕಲ್ಲಿದ್ದಲು ಇಲಾಖೆಯ ಮಾಜಿ ರಾಜ್ಯ ಸಚಿವ ದಾಸರಿ ನಾರಾಯಣರಾವ್ ಅವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಅಲ್ಲದೆ ಅವರಿಗೆ ಸಂಬಂಧಪಟ್ಟ ಕಚೇರಿ ಮತ್ತು ನಿವಾಸಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇದೀಗ ನವೀನ್ ಜಿಂದಾಲ್ ಅವರಿಗೆ ಸಮನ್ಸ್ ಜಾರಿ ಮಾಡಿರುವ ಸಿಬಿಐ ಅಧಿಕಾರಿಗಳು, ಕೂಡಲೇ ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ.

ಪ್ರಸ್ತುತ ನವೀನ್ ಜಿಂದಾಲ್ ಅವರು ಲಂಡನ್ ಪ್ರವಾಸದಲ್ಲಿದ್ದು, ವಿಚಾರಣೆ ಸಂಬಂಧ ಅವರು ಕೂಡಲೇ ಸಿಬಿಐ ಅಧಿಕಾರಗಳ ಮುಂದೆ ಹಾಜರಾಗಬೇಕಿದೆ. ಆದರೆ ಮೂಲಗಳ ಪ್ರಕಾರ ನಿನ್ನೆ ಸಿಬಿಐ ಅಧಿಕಾರಿಗಳು ನಡೆಸಿದ್ದ ದಾಳಿ ಇಂದೂ ಕೂಡ ಮುಂದುವರೆದಿದ್ದು, ನವೀನ್ ಜಿಂದಾಲ್ ಅವರ ದೆಹಲಿ ನಿವಾಸದಲ್ಲಿ ಅಧಿಕಾರಿಗಳು ಇಂದು ಪರಿಶೀಲನೆ ನಡೆಸಿದ್ದಾರೆ. ಅಂತೆಯೇ ನವೀನ್ ಅವರ ನಿವಾಸ ಮತ್ತು ಬ್ಯಾಂಕ್‌ಗಳಲ್ಲಿ ಅವರಿಗೆ ಸಂಬಂಧಪಟ್ಟ ಲಾಕರ್‌ಗಳಿದ್ದು, ಅವುಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನವೀನ್ ಅವರ ಕುಟುಂಬ ಸದಸ್ಯರನ್ನು ವಿಚಾರಿಸಿದಾಗ ಲಾಕರ್‌ಗಳಿಗೆ ಪ್ರತ್ಯೇಕ ಲಾಕಿಂಗ್ ವ್ಯವಸ್ಥೆ ಇದ್ದು, ಇದನ್ನು ಕೇವಲ ನವೀನ್ ಅವರು ಮಾತ್ರ ತೆರೆಯಬಹುದಾಗಿದೆ.

ಈ ಲಾಕರ್‌ಗಳಲ್ಲಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿರಬಹುದೆಂದು ಸಿಬಿಐ ಅಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದು, ಲಾಕರ್‌ಗಳನ್ನು ತೆರೆಯಲೆಂದೇ ನವೀನ್ ಜಿಂದಾಲ್ ಅವರಿಗೆ ಭಾರತಕ್ಕೆ ಬರುವಂತೆ ಸಮನ್ಸ್ ಜಾರಿಮಾಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಹೆಚ್.ಸಿ.ಗುಪ್ತಾ ವಿಚಾರಣೆಗೂ ಕೂಡ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ದೊರೆಯುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.