ಈಗಿನ ಸುದ್ದಿ

ಉಗ್ರರ ದಾಳಿ: ಐತಿಹಾಸಿಕ 'ಜಿನ್ನಾ' ಬಂಗಲೆ ಧ್ವಂಸ

ಉಗ್ರರ ದಾಳಿ: ಐತಿಹಾಸಿಕ 'ಜಿನ್ನಾ' ಬಂಗಲೆ ಧ್ವಂಸ
Published On :

ಇಸ್ಲಾಮಾಬಾದ್: ಪಾಕಿಸ್ತಾನ ಸ್ಥಾಪಕ ಮಹಮದ್ ಅಲಿ ಜಿನ್ನಾ ಅವರ ಐತಿಹಾಸಿಕ ಬಂಗಲೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಕಾಳಗದಿಂದಾಗಿ ಧ್ವಂಸಗೊಂಡಿದೆ.

ಪಾಕಿಸ್ತಾನದ ಬಲೂಚಿಸ್ತಾನ ಹೊರವಲಯದಲ್ಲಿರುವ 'ಖೈದ್-ಇ-ಅಜಮ್‌' ಎಂಬ ಮಹಮದ್ ಅಲಿ ಜಿನ್ನಾ ಅವರ ಭವ್ಯ ಬಂಗಲೆ ಧ್ವಂಸಗೊಂಡಿದೆ. 1892ರಲ್ಲಿ ನಿರ್ಮಿಸಲ್ಪಟ್ಟ ಸುಮಾರು 121 ವರ್ಷಗಳ ಬಂಗಲೆಯಲ್ಲಿ ಉಗ್ರರು ಅಡಗಿರುವ ಕುರಿತು ಮಾಹಿತಿ ಪಡೆದ ಪಾಕಿಸ್ತಾನ ಭದ್ರತಾ ಪಡೆಗಳು ದಾಳಿ ನಡೆಸಿವೆ. ಇಂದು ಬೆಳಗ್ಗೆಯಿಂದಲೇ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದು, ದಾಳಿಕೋರರ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಉಗ್ರರು ಕಟ್ಟಡದಲ್ಲಿ ಹುದುಗಿಸಿಟ್ಟಿದ್ದ ಬಾಂಬ್‌ಗಳು ಸ್ಫೋಟಗೊಂಡು ಐತಿಹಾಸಿಕ ಬಂಗಲೆಯ ಬಹುತೇಕ ಭಾಗ ಧ್ವಂಸವಾಗಿದೆ. ಉಗ್ರರು ಕಟ್ಟಡದಲ್ಲಿ ಬಾಂಬ್‌ಗಳನ್ನು ಹುದುಗಿಸಿಟ್ಟು, ನಂತರ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಕಟ್ಟಡದಲ್ಲಿದ್ದ ಐತಿಹಾಸಿಕ ಮರದ ಪೀಠೋಪಕರಣಗಳು, ಟೈಲ್ಸ್‌ಗಳು, ನೆಲಹಾಸು ಮತ್ತು ಮಹಮದ್ ಅಲಿ ಜಿನ್ನಾ ಅವರು ಬಳಸುತ್ತಿದ್ದ ಬಹುತೇಕ ವಸ್ತುಗಳು ನಾಶವಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಹಮದ್ ಅಲಿ ಜಿನ್ನಾ ಅವರು ತಮ್ಮ ಕೊನೆಗಾಲದಲ್ಲಿ ಇದೇ ಬಂಗಲೆಯಲ್ಲಿ ವಾಸವಿದ್ದು, ಅವರ ಮರಣಾನಂತರ ಈ ಬಂಗಲೆಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಣೆ ಮಾಡಲಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಗವರ್ನರ್ ಜನರಲ್‌ಗಳು ಈ ಭಂಗಲೆಯನ್ನು ತಮ್ಮ ಬೇಸಿಗೆ ತಂಗುದಾಣವಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿವೆ. ಅಲ್ಲದೆ ಇತ್ತೀಚೆಗಷ್ಟೇ ಅದನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿ, ಅಲ್ಲಿ ರೆಸಾರ್ಟ್ ನಿರ್ಮಿಸಲಾಗಿತ್ತು.

ಆದರೆ ಇಂದು ಬೆಳಗ್ಗೆ ನಡೆದ ಉಗ್ರರ ದಾಳಿಯಿಂದಾಗಿ ಜಿನ್ನಾ ಅವರ ಭಂಗಲೆ ಸಂಪೂರ್ಣ ನಾಶವಾಗಿದ್ದು, ಕೇವಲ ಇಟ್ಟಿಗೆ ಮತ್ತು ಕಲ್ಲುಗಳಿಂದ ಕೂಡಿದ ಭಾಗ ಮಾತ್ರ ಉಳಿದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಭಂಗಲೆಯಲ್ಲಿ ಮತ್ತೆ 3ಕೆಜಿಗಳಷ್ಟು ತೂಕದ 6 ಬಾಂಬ್‌ಗಳು ಪತ್ತೆಯಾಗಿದ್ದು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಅವುಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಚಿತ್ರ ಕೃಪೆ: ಎಕ್ಸ್ ಪ್ರೆಸ್ ನ್ಯೂಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.