ಬಸ್ ಪ್ರಯಾಣ ದರ ಏರಿಕೆ: ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಮತ್ತು ನಗರ ರಸ್ತೆ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗಳು ಪ್ರಯಾಣ ದರ ಏರಿಕೆ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ನೂತನ ದರಗಳು ಜಾರಿಗೆ ಬರಲಿವೆ.
ಡೀಸೆಲ್ ದರದಲ್ಲಿ ಪದೇ ಪದೇ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ತಮ್ಮ ಪ್ರಯಾಣ ದರವನ್ನು ಶೇ. ಹೆಚ್ಚಳ ಮಾಡಿದ್ದು, ಕೆಎಸ್ಆರ್ಟಿಸಿ ತನ್ನ ಪ್ರಯಾಣ ದರದಲ್ಲಿ ಶೇ.10.5 ರಷ್ಟು ಮತ್ತು ಬಿಎಂಟಿಸಿ ಶೇ.16 ರಷ್ಟು ದರ ಏರಿಕೆ ಮಾಡಿವೆ. ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಸಂಸ್ಥೆಗಳ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್ಆರ್ಟಿಸಿ ನಿರ್ವಾಹಕ ನಿರ್ದೇಶಕ ಮಂಜುನಾಥ್ ಪ್ರಸಾದ್ ಅವರು, 'ಬಸ್ ಪ್ರಯಾಣ ದರದಲ್ಲಿ ಶೇ. 10.5ರಷ್ಟು ದರ ಏರಿಕೆ ಮಾಡಲಾಗಿದೆ. ಕಳೆದ ಜನವರಿಯಿಂದಲೇ ದರ ಏರಿಕೆ ಮಾಡಲು ನಿಗಮ ಪ್ರಸ್ತಾಪ ಮಾಡಿತ್ತು. ಆದರೆ ದರ ಏರಿಕೆ ಮಾಡುವ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. 5 ತಿಂಗಳ ಅವಧಿಯಲ್ಲಿ 3 ಬಾರಿ ಡೀಸೆಲ್ ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ 4ನೇ ಬಾರಿಗೆ ಡೀಸೆಲ್ ದರ ಏರಿಕೆಯಾಗಿರುವುದರಿಂದ ಸಂಸ್ಥೆಗೆ ಪ್ರತಿನಿತ್ಯ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ. ಹೀಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿತ್ತು' ಎಂದು ಹೇಳಿದರು.
ಕಳೆದ ಹಲವು ತಿಂಗಳುಗಳಿಂದ ಡೀಸೆಲ್ ದರದಲ್ಲಿ ಪದೇ ಪದೇ ಏರಿಕೆಯಾಗುತ್ತಿದ್ದು, ಸಾರಿಗೆ ಸಂಸ್ಥೆಗಳ ಮೇಲೆ ಒತ್ತಡ ಬೀಳುತ್ತಿತ್ತು. ಅಲ್ಲದೆ ಕಳೆದ ಜನವರಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ ನೀಡುತ್ತಿದ್ದ ಸಗಟು ದರದ ಡೀಸೆಲ್ ಅನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ, ರಿಟೇಲ್ ದರ ಹೇರಿತ್ತು. ಇದರಿಂದಗಿ ಸಾರಿಗೆ ಸಂಸ್ಥೆಗಳು ಅತಿಯಾದ ನಷ್ಟ ಅನುಭವಿಸಿದ್ದವು. ಅಲ್ಲದೆ ನಷ್ಟವನ್ನು ಸ್ವಲ್ಪವಾದರೂ ತಡೆಯಲು ಸರ್ಕಾರಿ ಬಂಕ್ಗಳನ್ನು ಬಿಟ್ಟು ಖಾಸಗಿ ಬಂಕ್ಗಳಲ್ಲಿ ಡೀಸೆಲ್ ತುಂಬಿಸಿಕೊಳ್ಳುತ್ತಿದ್ದವು.
ಒಟ್ಟಾರೆ ಸಾರಿಗೆ ಸಂಸ್ಥೆಗಳ ಈ ದಿಡೀರ್ ನಿರ್ಧಾರ ಸಾರ್ವಜನಿಕರ ಮೇಲೆ ಅತಿಯಾದ ಹೊರೆಯಾಗುವುದರಲ್ಲಿ ಅನುಮಾನವಿಲ್ಲ. ಡೀಸೆಲ್ ದರ ಹೆಚ್ಚಳವಾದ್ದರಿಂದ ಅಗತ್ಯ ವಸ್ತುಗಳ ಮೇಲಿನ ದರ ಕೂಡ ಹೆಚ್ಚಳವಾಗುವ ಅಪಾಯ ಎದುರಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


