ಎಐಸಿಸಿ ಕ್ರಿಯಾ ಸಮಿತಿ ಪುನರ್‌ರಚನೆ
ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ಪುನರ್ ವಿಂಗಡಣೆ ಮಾಡಲಾಗಿದ್ದು, 21 ಸದಸ್ಯರಿಗೆ ವಿವಿಧ ಹುದ್ದೆಗಳನ್ನು ನೀಡಲಾಗಿದೆ.
ನವದೆಹಲಿಯಲ್ಲಿ ಕ್ರಿಯಾ ಸಮಿತಿ ಪುನರ್ ವಿಂಗಡಣೆ ಕುರಿತು ಮಾಹಿತಿ ನೀಡಿದ ದಿಗ್ವಿಜಯ್ ಸಿಂಗ್ ಅವರು ಪಟ್ಟಿಯಲ್ಲಿನ ಸದಸ್ಯರ ಕುರಿತು ಮಾಹಿತಿ ನೀಡಿದರು. ಅದರಂತೆ ಕಾಂಗ್ರೆಸ್ ವಕ್ತಾರರಾಗಿದ್ದ ದಿಗ್ವಿಜಯ್ ಸಿಂಗ್ ಅವರಿಗೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಗೋವಾ ರಾಜ್ಯಗಳ ಮೇಲುಸ್ತುವಾರಿ ನೀಡಲಾಗಿದೆ. ಅಂತೆಯೇ ಕರ್ನಾಟಕದ ಹಿರಿಯ ರಾಜಕಾರಣಿ ಬಿ.ಕೆ.ಹರಿಪ್ರಸಾದ್ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಅಲ್ಲದೆ ನೂತನ ಕ್ರಿಯಾ ಸಮಿತಿಯಲ್ಲಿ ಒಟ್ಟು 12 ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.
ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಸಿಪಿ ಜೋಷಿ ಮತ್ತು ಅಜಯ್ ಮಕೇನ್ ಅವರಿಗೂ ಸಮಿತಿಯಲ್ಲಿ ಸ್ಥಾನ ನೀಡಲಾಗಿದ್ದು, ಸಿಪಿ ಜೋಷಿ ಅವರಿಗೆ ಕಾರ್ಯದರ್ಶಿ ಹುದ್ದೆ ಮತ್ತು ಅಜಯ್ ಮಕೇನ್ ಅವರಿಗೆ ಮಾಧ್ಯಮ ವಿಭಾಗದ ನಿರ್ವಹಣೆ ನೀಡಲಾಗಿದೆ. ಎಂ.ವಿ ರಾಜಶೇಖರನ್, ಆಸ್ಕರ್ ಫರ್ನಾಂಡಿಸ್ ಮತ್ತು ಎಸ್‌ಎಂ ಕೃಷ್ಣಾ ಅವರು ನೂತನ ಕ್ರಿಯಾ ಸಮಿತಿಯ ಗೌರವಾನ್ವಿತ ಸದಸ್ಯರಾಗಿದ್ದಾರೆ.
ಅಂಬಿಕಾ ಸೋನಿ ಅವರಿಗೆ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿದ್ದು, ಸಿಪಿ ಜೋಷಿ ಅವರಿಗೆ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಂಡಮಾನ್ ನಿಕೋಬಾರ್ ಮೇಲುಸ್ತುವಾರಿ ನೀಡಲಾಗಿದೆ. ಅಂತೆಯೇ ಜನಾರ್ಧನ್ ದ್ವಿವೇದಿ ಅವರಿಗೆ ಎಐಸಿಸಿ, ಸಿಡಬ್ಲ್ಯೂಸಿ, ಸಾಂಸ್ಥಿಕ ಚುನಾವಣೆಗಳ ಮೇಲುಸ್ತುವಾರಿ ವಹಿಸಲಾಗಿದೆ.
ಗುರುದಾಸ್ ಕಾಮತ್ ಅವರಿಗೆ ಗುಜರಾತ್, ರಾಜಸ್ತಾನ ರಾಜ್ಯಗಳ ಮೇಲುಸ್ತುವಾರಿ ನೀಡಲಾಗಿದ್ದು, ಕರ್ನಾಟಕ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಮಧುಸೂದನ್ ಮಿಸ್ತ್ರಿ ಅವರಿಗೆ ಉತ್ತರ ಪ್ರದೇಶ ಮತ್ತು ಕೇಂದ್ರೀಯ ಚುನಾವಣಾ ಮೇಲುಸ್ತುವಾರಿ ನೀಡಲಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ ಹಿನ್ನಲೆಯಲ್ಲಿ ಮಿಸ್ತ್ರಿ ಅವರಿಗೆ ಈ ನೂತನ ಜವಾಬ್ದಾರಿ ವಹಿಸಲಾಗಿದೆ.
ಒಟ್ಟಾರೆ ಕಾಂಗ್ರೆಸ್ ಹೈಕಮಾಂಡ್ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಕ್ರಿಯಾ ಸಮಿತಿಯನ್ನು ಪುನರ್ ವಿಂಗಡಣೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

