ಉಗ್ರರ ದಾಳಿ: ಐದು ಸೈನಿಕರ ಸಾವು, ಓರ್ವ ಗಂಭೀರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಸೋಮವಾರ ರಾಜಧಾನಿ ಶ್ರೀನಗರದ ಹೊರವಲಯದಲ್ಲಿ ನಡೆದ ದಾಳಿಯಲ್ಲಿ ಐದು ಸೈನಿಕರು ಹತರಾಗಿದ್ದು, ಓರ್ವ ಸೈನಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶ್ರೀನಗರದ ಹೊರವಲಯ ಪ್ರದೇಶವಾಗಿರುವ ಹೈದರ್‌ಪೊರಾ ರಸ್ತೆಯ ಎರಡೂ ಬದಿಯಲ್ಲಿ ಅವಿತು ಕುಳಿತಿದ್ದ ಉಗ್ರರು ಸೈನಿಕರು ಆಗಮಿಸುತ್ತಿದ್ದಂತೆಯೇ ಗುಂಡಿನ ಮಳೆಗರೆದಿದ್ದಾರೆ. ಪ್ರತಿದಾಳಿ ನಡೆಸಲು ಸಮಯಾವಕಾಶವನ್ನು ನೀಡದ ಉಗ್ರರು, ಸುಮಾರು 12 ಸುತ್ತು ಗುಂಡು ಹಾರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸ್ಥಳೀಯರ ಪ್ರಕಾರ ಕಾರು ಮತ್ತು ಬೈಕ್‌ಗಳಲ್ಲಿ ಬಂದ 6 ಮಂದಿ ಯುವಕರ ತಂಡ ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಬೆಂಗಾವಲು ಪಡೆಯ ಐದು ಸೈನಿಕರು ಸಾವಿಗೀಡಾಗಿದ್ದು, ಓರ್ವ ಸೈನಿಕನ ಸ್ಥಿತಿ ಚಿಂತಾಜನಕವಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸೈನಿಕರ ತಂಡ ಸ್ಥಳದಲ್ಲಿ ಶೋಧ ಕಾರ್ಯ ಆರಂಭಿಸಿದ್ದು, ಸ್ಥಳೀಯರು ಉಗ್ರರೊಂದಿಗೆ ಕೈ ಜೋಡಿಸಿರುವ ಕುರಿತು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ನಾಳೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ರೈಲುಮಾರ್ಗ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಪ್ರಧಾನಿಗಳ ಭೇಟಿಯನ್ನೇ ಗುರಿಯಾಗಿರಿಸಿಕೊಂಡಿರುವ ಉಗ್ರರು, ಈ ವೇಳೆ ದುಷ್ಕೃತ್ಯವೆಸಗಲು ಹವಣಿಸುತ್ತಿದ್ದಾರೆ. ಈ ಹಿಂದೆಯೂ ಕೂಡ ಉಗ್ರರು ಶ್ರೀನಗರದಲ್ಲಿ ಇಬ್ಬರು ಪೊಲೀಸ್ ಪೇದೆಗಳನ್ನು ಹತ್ಯೆಗೈಯ್ಯುವ ಮೂಲಕ ನಗರದ ಜನತೆಯಲ್ಲಿ ಭೀತಿ ಹುಟ್ಟಿಸಲು ಯತ್ನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

