ಖುರ್ಷೀದ್ ಮೇಲೆ ಹೆಚ್ಚಿದ ಒತ್ತಡ: ಚೀನಾ ಪ್ರವಾಸ ರದ್ದು?

ನವದೆಹಲಿ: ಚೀನಾ ಯೋಧರ ಗಡಿ ಅತಿಕ್ರಮಣ ವಿಚಾರ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರಿಗೆ ತಲೆನೋವಾಗಿ ಪರಿಣಮಿಸಿದ್ದು, ವಿಪಕ್ಷಗಳ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಖುರ್ಷೀದ್ ಅವರ ಚೀನಾ ಪ್ರವಾಸ ರದ್ದುಗೊಳ್ಳುವ ಸಾಧ್ಯತೆ ಇದೆ.
ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಸರ್ಕಾರ ಭಾರತಕ್ಕೆ ಸಕಾರಾತ್ಮಕ ಭರವಸೆ ನೀಡದಿದ್ದರೆ, ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಅವರು ತಮ್ಮ ಚೀನಾ ಪ್ರವಾಸವನ್ನು ರದ್ದು ಮಾಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಭಾರತ ಸಮಸ್ಯೆ ಬಗೆಹರಿಸಲು ಚೀನಾ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದು, ಅವಧಿಯೊಳಗೆ ಸ್ಪಂದಿಸದಿದ್ದರೆ ಸಚಿವ ಸಲ್ಮಾನ್ ಖುರ್ಷೀದ್ ಅವರು ತಮ್ಮ ಚೀನಾ ಪ್ರವಾಸವನ್ನು ರದ್ದುಗೊಳಿಸಲಿದ್ದಾರೆ.
ಪ್ರಸ್ತುತ ತೆಹ್ರಾನ್ ಪ್ರವಾಸದಲ್ಲಿರುವ ಖುರ್ಷೀದ್ ಅವರು, ಗಡಿ ಅತಿಕ್ರಮಣ ವಿಚಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. 'ಗಡಿ ಅತಿಕ್ರಮಣ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ನಡೆಯುತ್ತಿರುವ ಮಾತುಕತೆ ಸಮಾಧಾನಕರವಾಗಿಲ್ಲ. ಆದರೆ ಭಾರತಕ್ಕೆ ಚೀನಾ ಸಕಾರತ್ಮಕವಾಗಿ ಸ್ಫಂದಿಸಲಿದೆ ಎನ್ನುವ ಆಶಾಭಾವನೆ ಇದೆ ಎಂದು ಖುರ್ಷೀದ್ ಅವರು ಹೇಳಿದ್ದಾರೆ. ಅಂತೆಯೇ ಚೀನಾ ಪ್ರವಾಸವನ್ನು ರದ್ದುಗೊಳಿಸುವಂತೆ ವಿಪಕ್ಷಗಳು ಹೇರುತ್ತಿರುವ ಒತ್ತಾಯದ ಕುರಿತು ಮಾತನಾಡಿರುವ ಅವರು, ಪ್ರಸ್ತುತ ನಾನು ತೆಹ್ರಾನ್ ಪ್ರವಾಸದಲ್ಲಿದ್ದೇನೆ. ಭಾರತಕ್ಕೆ ವಾಪಸ್ಸಾದ ನಂತರ ಮುಂದಿನ ಕಾರ್ಯಕ್ರಮಗಳ ಕುರಿತು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದರು.
ಒಟ್ಟಾರೆ ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ತೊಡಕಾಗಿರುವ ಗಡಿ ಅತಿಕ್ರಮಣ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕೇಂದ್ರ ಸರ್ಕಾರ ಇಂತಹ ಗಂಭೀರ ವಿಚಾರದ ಬಗ್ಗೆ ಬೇಕೆಂದೇ ನಿಧಾನಗತಿ ಧೋರಣೆ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಆದರೆ ಸರ್ಕಾರದ ಧೋರಣೆ ಗಡಿಯಲ್ಲಿ ಕಾವಲು ಕಾಯುತ್ತಿರುವ ನಮ್ಮ ಸೈನಿಕರ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಸರ್ಕಾರ ಮನಗಾಣಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


