ಈಗಿನ ಸುದ್ದಿ

ಮತದಾನದ ಸಂಪೂರ್ಣ ಚಿತ್ರಣ

ಮತದಾನದ ಸಂಪೂರ್ಣ ಚಿತ್ರಣ
Published On :

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಬಹುತೇಕ ಶಾಂತಿಯುತವಾಗಿ ನೇರವೇರಿದ್ದು, ಮತದಾನ ಕೆಲ ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿತ್ತು.

ಕರ್ನಾಟಕ ವಿಧಾನಸಭೆಯ ಪ್ರವೇಶಕ್ಕಾಗಿ 223 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು 2940 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದರು. ಇಂದು ನಡೆದ ಮತದಾನ ಕೆಲವು ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಬಹುತೇಕ ಶಾಂತಿಯುತವಾಗಿ ನಡೆದಿತ್ತು.

ಪ್ರಸಕ್ತ ಚುನಾವಣೆಯಲ್ಲಿ ಒಟ್ಟು ಐದು ಪ್ರಮುಖ ಪಕ್ಷಗಳ ನಾಯಕರು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದು, ಕಾಂಗ್ರೆಸ್, ಬಿಜೆಪಿ, ಜನಾತಾದಳ(ಜ್ಯಾತ್ಯಾತೀತ), ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಮತ್ತು ನೂರಾರು ಪಕ್ಷೇತರ ಅಭ್ಯರ್ಥಿಗಳು ವಿಧಾನಸಭೆ ಪ್ರವೇಶಕ್ಕಾಗಿ ಕಾದಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ ರಾಜ್ಯದ ಹಲವು ಘಟಾನುಘಟಿ ನಾಯಕರು, ಚಿತ್ರ ತಾರೆಯರು, ರಾಜ್ಯದ ಪ್ರಮುಖ ಉಧ್ಯಮಿಗಳು ಮತ್ತು ಕೇಂದ್ರ ಸಚಿವರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅಂತೆಯೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಹುತೇಕ ಶಾಂತಿಯುತ ಮತದಾನವಾಗಿದೆ.

ಆದರೆ ಕೆಲವು ಅಹಿತಕರ ಘಟನೆಗಳೂ ಕೂಡ ನಡೆದಿದ್ದು, ಕೋಲಾರದಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ನಡು ರಸ್ತೆಯಲ್ಲಿಯೇ ಮಚ್ಚು ಲಾಂಗುಗಳ ಪ್ರದರ್ಶನ ಮಾಡುವ ಮೂಲಕ ಸಾರ್ವಜನಿಕರಲ್ಲಿ ಆತಂಕಕಾರಿ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ರಾಣೆಬೆನ್ನೂರಿನ ತುಮ್ಮಿನಕಟ್ಟಿ ನಿವಾಸಿಯಾಗಿರುವ ಶಿಕ್ಷಕಿ ಲೀಲಾವತಿ ಎನ್ನುವವರು ಚುನಾವಣಾ ಕರ್ತವ್ಯದಲ್ಲಿರುವಾಗಲೇ ಸಾವನ್ನಪ್ಪಿದ್ದರು. ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಬೆಂಬಲಿಗರು ಮತದಾನದ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವುದು ಕಂಡುಬಂದಿತ್ತು. ಬೆಂಗಳೂರಿನ ಬೊಮ್ಮನ ಹಳ್ಳಿಯಲ್ಲಿ ಸುಮಾರು 85 ನಕಲಿ ಮತದಾರರನ್ನು ಪೊಲೀಸರು ಬಂಧಸಿದ್ದರು.

ಅಂತೆಯ ಬೆಳಗಾವಿಯ ಸೂಳೆಬಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಮಧುಗಿರಿಯಲ್ಲಿ ಚುನಾವಣಾಧಿಕಾರಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದರಿಂದ ಕೆಲಹೊತ್ತು ಮತದಾನ ಸ್ಥಗಿತಗೊಂಡಿತ್ತು. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದನು. ರಾಯಚೂರಿನ ಲಿಂಗಸುಗೂರಿನ ತೂರಡಗಿ ಗ್ರಾಮದಲ್ಲಿ ನಡೆಯುತ್ತಿದ್ದ ಮತದಾನದ ವೇಳೆ ಮತದಾರನೊಬ್ಬ ಮತಯಂತ್ರವನ್ನೇ ಧ್ವಂಸಗೊಳಿಸಿದ್ದನು. ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಬೆಂಗಳೂರಿನ ಸಿ.ವಿ.ರಾಮನ್ ನಗರದ ವಾರ್ಡ್ ನಂಬರ್ 68 ಮತ್ತು 79ರಲ್ಲಿ ಮತದಾರರು ಮತದಾನವನ್ನೇ ಬಹಿಷ್ಕರಿಸಿದ್ದರು.

ಹಾಸನ ಜಿಲ್ಲೆಯಲ್ಲಿ ತಮ್ಮ ಮತ ಹಾಕಲು ದೇವೇಗೌಡರೊಂದಿಗೆ ಆಗಮಿಸಿದ್ದ ರೇವಣ್ಣ ಅವರು ಮತ ಹಾಕುವ ಸಂದರ್ಭದಲ್ಲಿ ಮತ ಯಂತ್ರವನ್ನು ವಾಸ್ತುಶಾಸ್ತ್ರದ ಮೇಲಿನ ನಂಬಿಕೆಯಿಂದಾಗಿ 3 ಬಾರಿ ತಿರುಗಿಸಿ ಮತ ಹಾಕಿದ್ದರು. ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಕಾರಿನಲ್ಲಿಯೇ ಕುಳಿತು, ರಾಹುಕಾಲ ಕಳೆದ ನಂತರ ಮತಗಟ್ಟೆ ಪ್ರವೇಶಿಸಿದ್ದರು.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ನಾಪತ್ತೆಯಾಗಿವೆ ಎಂದು ಆರೋಪಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ನೂರಾರು ನಿವಾಸಿಗಳು ಮತಗಟ್ಟೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಅಂತೆಯೇ ಬೆಂಗಳೂರಿನ ಮತ್ತೊಂದು ಪ್ರಮುಖ ಕ್ಷೇತ್ರವಾಗಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿಯೂ ಮತದಾರರ ಹೆಸರುಗಳು ನಾಪತ್ತೆಯಾಗಿದ್ದು, ವಿಧ್ಯಮಾನ್ಯನಗರ ಮತಗಟ್ಟೆಯ ಬಳಿ ಸುಮಾರು 300ರಿಂದ 400 ನಿವಾಸಿಗಳು ಪ್ರತಿಭಟನೆ ನಡೆಸಿದ್ದರು.

ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಗ್ರಾಮಗಳಾದ ಸರ್ಜಾಪುರ, ಕುಪ್ಪಿಗಡ್ಡ, ಅಮರಾವತಿ ಗ್ರಾಮದ ಮುಖ್ಯಸ್ಥರು ಮತದಾನವನ್ನು ಬಹಿಷ್ಕರಿಸಿದ್ದರು. ಗದಗ ಜಿಲ್ಲೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮತದಾನ ಕೆಲಹೊತ್ತು ಸ್ಥಗಿತಗೊಂಡಿತ್ತು. ಅಂತೆಯೇ ತುಮಕೂರಿನಲ್ಲಿ ನವ ವಧು ವರರು ಮತದಾನ ಮಾಡುವ ಮೂಲಕ ಮತದಾನದ ಮಹತ್ವ ಸಾರಿದರು. ಇಂದು ಮಧ್ಯಾಹ್ನ ರಾಜ್ಯದ ಹಲವೆಡೆ ಸುರಿದ ಭಾರಿ ಮಳೆ ಕೂಡ ಮತದಾನಕ್ಕೆ ಅಡ್ಡಿಯಾಗಿತ್ತು. ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ಮಡಿಕೇರಿ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮತದಾನಕ್ಕೆ ಅಡ್ಡಿಯಾಗಿತ್ತು.

ಒಟ್ಟಾರೆ ಕೆಲವು ಅಹಿತಕರ ಘಟನೆಗಳನ್ನು ಹೊರತು ಪಡಿಸಿದರೆ ಇಂದು ನಡೆದ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿದ್ದು, ಹಲವು ರೋಚಕ ಘಟನೆಗಳಿಗೆ ಸಾಕ್ಷಿಯಾಯಿತು. ಇದೇ ಮೇ 8 ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಂದೇ ಅಧಿಕಾರದ ಚುಕ್ಕಾಣಿಯನ್ನು ಯಾವ ಪಕ್ಷ ಹಿಡಿಯಲಿದೆ ಎಂದು ತಿಳಿಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.