ಈಗಿನ ಸುದ್ದಿ

ವಿಧಾನಸಭೆ ಚುನಾವಣೆ: ರಾಜ್ಯದ ಪ್ರಮುಖರಿಂದ ಮತದಾನ

Published On :

ಬೆಂಗಳೂರು: ಕರ್ನಾಟಕ ವಿಧಾನಸಭೆಗಾಗಿ ಭಾನುವಾರ ನಡೆಯುತ್ತಿರುವ ಮತದಾನ ಪ್ರಕ್ರಿಯೆ ಸಂಜೆ ವೇಳೆಗೆ ಚುರುಕು ಪಡೆದುಕೊಂಡಿದ್ದು, ರಾಜ್ಯದ ಪ್ರಮುಖರು, ಚಿತ್ರ ತಾರೆಯರು, ರಾಜಕಾರಣಿಗಳು, ಉದ್ಯಮಿಗಳು ಮತದಾನ ಮಾಡಿದ್ದಾರೆ.

ಇಂದು ಬೆಳಗ್ಗೆ ಆರಂಭಗೊಂಡಿದ್ದ ಮತದಾನ ಹಲವು ಅಡಟಣೆ ಮತ್ತು ಕೆಲವು ಅಹಿತಕರ ಘಟನೆಗಳ ನಡುವೆಯೂ ಬಿರುಸಿನಿಂದ ಕೂಡಿದೆ. ರಾಜ್ಯದಲ್ಲಿ ಬಿಸಿಲಿನನ ಝಳ ಹೆಚ್ಚಾಗಿದ್ದರಿಂದ ಮಧ್ಯಾಹ್ನದ ಹೊತ್ತಿನಲ್ಲಿ ಮತದಾನ ಕೊಂಚ ನೀರಸವಾಗಿತ್ತು. ಸಂಜೆ ವೇಳೆಗೆ ಮತದಾನ ಮತ್ತೆ ಚುರುಕು ಪಡೆದುಕೊಂಡಿದೆ. ರಾಜ್ಯದ ಘಟಾನುಘಟಿ ನಾಯಕರು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಚಿತ್ರ ತಾರೆಯರೂ ಸಹ ಸರತಿ ಸಾಲಲ್ಲಿ ನಿಂತು ಮತದಾನ ಮಾಡಿದ್ದಾರೆ.

ಚಿತ್ರ ನಟಿ ಮತ್ತು ಬಿಜೆಪಿ ಮುಖಂಡರಾದ ತಾರಾ ಅವರು ತಮ್ಮ ಪತಿ ವೇಣು ಅವರೊಂದಿಗೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಸಂಸದ ಸುರೇಶ್ ಅಂಗಡಿ ಅವರು, ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣಾ ಅವರು ಮತದಾನ ಮಾಡಿದ್ದಾರೆ. ಅಂತೆಯೇ ಚಿತ್ರ ನಟರಾದ ರಾಧಿಕಾ ಪಂಡಿತ್, ಅವಿನಾಶ್ ಮತ್ತು ಮಾಳವಿಕ ಅವರು ತಮ್ಮ ಹಕ್ಕುಗಳನ್ನು ಚಲಾವಣೆ ಮಾಡಿದ್ದಾರೆ.

ರಾಜರಾಜೇಶ್ವರಿನಗರದಲ್ಲಿ ನಟ ದರ್ಶನ್ ಅವರು ತಮ್ಮ ಪತ್ನಿಯೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ. ಹೊನ್ನಾಳಿಯಲ್ಲಿ ಕೆಜೆಪಿ ಅಭ್ಯರ್ಥಿ ರೇಣುಕಾಚಾರ್ಯ ಅವರು ಮತದಾನ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಸಚಿವ ಸೋಮಣ್ಣ ಅವರು ಹಕ್ಕು ಚಲಾಯಿಸಿದರು. ಅಂತೆಯೇ ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರು, ನ್ಯಾ.ಸಂತೋಷ್ ಹೆಗಡೆ ಅವರು ಮತದಾನ ಮಾಡಿದರು.

ರಾಯಚೂರಿನ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ನಟಿ ಪೂಜಾಗಾಂಧಿ ಅವರು ಮತಗಟ್ಟೆಗೆ ತೆರಳಿ ಚುನಾವಣಾಧಿಕಾರಿಗಳ ಮತ್ತು ಮತದಾರರೊಂದಿಗೆ ಉಭಯ ಕುಶಲೋಪರಿ ನಡೆಸಿದರು. ಈ ಹಂತದಲ್ಲಿ ಮತಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್‌ಪಿ ದಿವ್ಯಾ ಅವರು ಪೂಜಾ ಗಾಂಧಿ ಅವರನ್ನು ಮತದಾನ ಕೇಂದ್ರದಿಂದ ಹೊರಹೋಗುವಂತೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.