ಲೋಕಸಭೆಯಿಂದ ಜೆಪಿಸಿ ಅವಧಿ ಹೆಚ್ಚಳ
ನವದೆಹಲಿ: ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ಅವಧಿಯನ್ನು ಮುಂದಿನ ಮುಂಗಾರು ಅಧಿವೇಶನದವರೆಗೂ ವಿಸ್ತರಿಸಲು ಲೋಕಸಭೆ ಸೋಮವಾರ ನಿರ್ಧರಿಸಿದೆ.
2ಜಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜವಾಬ್ದಾರಿ ವಹಿಸಿಕೊಂಡಿರುವ ಪಿ.ಸಿ.ಚಾಕೋ ಅವರ ನೇತೃತ್ವದ ಜೆಪಿಸಿ ಸಮಿತಿಗೆ ವರದಿಯನ್ನು ಒಪ್ಪಿಸಲು ನೀಡಿದ್ದ ಕಾಲಾವಕಾಶವನ್ನು ಮುಂದಿನ ಮುಂಗಾರು ಅಧಿವೇಶನದವರೆಗೂ ವಿಸ್ತರಿಸಲಾಗಿದೆ. ಈ ಬಗ್ಗೆ ನಿರ್ಣಯ ಕೈಗೊಳ್ಳಲು ಇಂದು ಲೋಕಸಭೆಯಲ್ಲಿ ಚುನಾವಣೆ ಮಾಡಲಾಯಿತು. ಲೋಕಸಭೆಯ ಸದಸ್ಯರ ಧ್ವನಿಮತಗಳ ಮೂಲಕ ನಿರ್ಣಯವನ್ನು ಅಂಗೀಕಾರ ಮಾಡಲಾಯಿತು.
2ಜಿ ಹಗರಣದ ತನಿಖೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಯು ತನ್ನ ಅಂತಿಮ ವರಿದಿಯನ್ನು ಇದೇ ಮೇ 10ರೊಳಗೆ ಸಲ್ಲಿಸಬೇಕಿತ್ತು. ಆದರೆ ಹಗರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಟೆಲಿಕಾಮ್ ಸಚಿವ ಎ.ರಾಜಾ, ಹಗರಣದಲ್ಲಿ ಪ್ರಧಾನಿ ಮತ್ತು ವಿತ್ತ ಸಚಿವರು ಭಾಗಿಯಾಗಿದ್ದಾರೆ ಎಂದು ಹೇಳುವ ಮೂಲಕ ಹೊಸದೊಂದು ಬಾಂಬ್ ಸಿಡಿಸಿದ್ದರು. ಕಳೆದ ಏಪ್ರಿಲ್ 25ರಂದು ಪಿ.ಸಿ.ಚಾಕೋ ಅವರು ಹಗರಣದ ತನಿಖೆಯ ಅಂತಿಮ ಕರಡು ವರದಿಯನ್ನು ಲೋಕಸಭೆಗೆ ನೀಡಿದ್ದರು.
ಚಾಕೋ ಅವರ ಕರಡು ವರದಿಯಲ್ಲಿ ಹಗರಣದಲ್ಲಿ ಪ್ರಧಾನಿ ಮನ ಮೋಹನ್ ಸಿಂಗ್ ಮತ್ತು ವಿತ್ತ ಸಚಿವರ ಪಾತ್ರವಿಲ್ಲ ಎಂದು ಹೇಳಿದ್ದರು. ಇದು ವಿವಾದಕ್ಕೆ ಗ್ರಾಸವಾಗಿತ್ತು. ಚಾಕೋ ಅವರು ತಮ್ಮ ತನಿಖೆಯಲ್ಲಿ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಅಲ್ಲದೆ ಚಾಕೋ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದವು. ಅಂದೇ ಡಿಎಂಕೆ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಸ್ಪೀಕರ್ ಅವರಿಗೆ ಪತ್ರಬರೆದು ಚಾಕೋ ಅವರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದವು.
ಅಲ್ಲದೆ ತಮ್ಮ ಪತ್ರದಲ್ಲಿ ಚಾಕೋ ಅವರು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಜೆಪಿಸಿ ಅಧ್ಯಕ್ಷ ಸ್ಥಾನದಿಂದ ಅವರನ್ನು ವಜಾಗೊಳಿಸುವಂತೆ ಸ್ಪೀಕರ್ ಮೀರಾಕುಮಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದವು. ಆದರೆ ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳದೆ, ಚಾಕೋ ಅವರನ್ನೇ ಜೆಪಿಸಿ ಅಧ್ಯಕ್ಷರನ್ನಾಗಿ ಮುಂದುವರೆಸಲು ನಿರ್ಧರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

