ಪಾಕಿಸ್ತಾನದಲ್ಲಿ ಗಿಲಾನಿ ಪುತ್ರನ ಅಪಹರಣ

ಮುಲ್ತಾನ್: ಪಾಕಿಸ್ತಾನದ ಮುಲ್ತಾನ್ನಲ್ಲಿ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಪುತ್ರನನ್ನು ಅಪರಿಚಿತ ಬಂದೂಕುಧಾರಿ ವ್ಯಕ್ತಿ ಅಪಹರಿಸಿದ್ದಾನೆ.
ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮುಲ್ತಾನಲ್ಲಿ ನಡೆಯುತ್ತಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಪುತ್ರ ಅಲಿ ಹೈದರ್ನನ್ನು ಅಪಹರಿಸಲಾಗಿದೆ. ಅಪಹರಣ ವೇಳೆ ಆತನನ್ನು ತಡೆಯಲು ಬಂದ ಗಿಲಾನಿ ಅವರ ಆಪ್ತಕಾರ್ಯದರ್ಶಿ ಮತ್ತು ಭದ್ರತಾ ಸಿಬ್ಬಂದಿಯನ್ನು ಅಪಹರಣಕಾರ ಗುಂಡಿಟ್ಟು ಕೊಂದು ಹಾಕಿದ್ದಾನೆ.
ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಲ್ತಾನ್ನಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮುಲ್ತಾನ್ನ ಅತ್ಯಂತ ಜನ ನಿಬಿಡ ರಸ್ತೆ ಮಟ್ಟಿ-ತಲ್ ರಸ್ತೆಯಲ್ಲಿ ಗಿಲಾನಿ ಪುತ್ರ ಅಲಿ ಹೈದರ್ ಅಪಹರಣಕ್ಕೊಳಗಾಗಿದ್ದಾನೆ. ಅಪಹರಣ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಗಿಲಾನಿ ಆಪ್ತ ಕಾರ್ಯದರ್ಶಿ ಮೊಹಿದ್ದೀನ್ ಸಾವನ್ನಪ್ಪಿದ್ದು, ರ್ಯಾಲಿಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಸುಮಾರು 10 ಮಂದಿ ಹಲ್ಲೆಗೊಳಗಾಗಿದ್ದಾರೆ.
ಅಲಿ ಹೈದರ್ನನ್ನು ದುಷ್ಕರ್ಮಿಗಳು ಅಪಹರಣ ಮಾಡುವ ವೇಳೆ ಅವರ ಸಹೋದರರಾದ ಅಲಿ ಮೂಸಾ ಮತ್ತು ಅಬ್ದುಲ್ ಖಾದಿರ್ ಅವರು ಜೊತೆಯಲ್ಲಿಯೇ ಇದ್ದರು.
ಅಪಹರಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗಿಲಾನಿ ಪುತ್ರ ಮತ್ತು ಅಲಿ ಹೈದರ್ ಸಹೋದರ ಅಲಿ ಮೂಸಾ, ನನ್ನ ಸಹೋದರನ ಅಪಹರಣವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮುಲ್ತಾನ್ನಲ್ಲಿ ಚುನಾವಣೆ ನಡೆಸಲು ಬಿಡುವುದಿಲ್ಲ. ನನ್ನ ಸಹೋದರ ಯಾವುದೇ ಅಪಾಯವಿಲ್ಲದೆ ವಾಪಸಾಗಬೇಕು ಎಂದು ಗದ್ಗದಿತರಾಗಿ ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಮಾಜಿ ಪ್ರಧಾನಿ ಪುತ್ರನ ಅಪಹರಣವಾಗಿರುವುದು ಪಾಕಿಸ್ತಾನದಾದ್ಯಂತ ಸಂಚಲನ ಉಂಟುಮಾಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಾಕ್ ಸರ್ಕಾರ ತನಿಖೆಗೆ ಆದೇಶಿಸಿದ್ದು, ಗಿಲಾನಿ ಪುತ್ರನ ಅಪಹರಣ ಮಾಡಿದವರನ್ನು ಶೀಘ್ರ ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


