ಈಗಿನ ಸುದ್ದಿ

ಸಂಜಯ್‌ದತ್ ಅರ್ಜಿ ತಿರಸ್ಕಾರ, ಮೇ 15ಕ್ಕೆ ಶರಣಾಗತಿ

ಸಂಜಯ್‌ದತ್ ಅರ್ಜಿ ತಿರಸ್ಕಾರ, ಮೇ 15ಕ್ಕೆ ಶರಣಾಗತಿ
Published On :

ನವದೆಹಲಿ: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣದ ಅಪರಾಧಿಯಾಗಿರುವ ನಟ ಸಂಜಯ್ ದತ್ ಅವರ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

1993ರ ಮುಂಬೈ ಸರಣಿ ಸ್ಫೋಟದ ವೇಳೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗಲು 4 ವಾರಗಳ ಕಾಲಾವಕಾಶ ಕೇಳಿದ್ದ ಸಂಜಯ್‌ದತ್, ಕಳೆದ ಏಪ್ರಿಲ್ 21ರಂದು ನ್ಯಾಯಾಲಯಾ ಶರಣಾಗತಿ ಗಡುವು ವಿಸ್ತರಿಸುತ್ತಿದ್ದಂತೆಯೇ ಇತ್ತ ತಮ್ಮ ವಿರುದ್ಧ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದರು.

ದತ್ ಅವರ ಮರು ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ.ಪಿ.ಸದಾಶಿವಂ ಮತ್ತು ಬಿ.ಎಸ್ ಚೌಹಾಣ್ ಅವರ ನೇತೃತ್ವದ ದ್ವಿಸದಸ್ಯ ಪೀಠ, ಇಂದು ಅರ್ಜಿಯನ್ನು ವಜಾಗೊಳಿಸಿದೆ. 'ದತ್ ಅವರಿಗೆ ನೀಡಿರುವ ಕಾಲಾವಕಾಶ ಮುಗಿದಿದ್ದು, ಅವರಿಗೆ ನೀಡಿರುವ ವಿನಾಯಿತಿಯನ್ನು ಮುಂದುವರೆಸಲು ಸಾಧ್ಯವಿಲ್ಲ. ಹೀಗಾಗಿ ಅವರು ಮೇ 15 ರಂದು ಶರಣಾಗಲೇಬೇಕಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಅದರಂತೆ ಇದೇ ಮೇ 15 ರಂದು ಬಾಲಿವುಡ್ ನಟ ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ. ಅಂತೆಯೇ ಬಾಕಿ ಉಳಿದಿರುವ 42 ತಿಂಗಳುಗಳ ಜೈಲು ಶಿಕ್ಷೆಯನ್ನು ಅನುಭವಿಸಲಿದ್ದಾರೆ.

ಇದೇ ರೀತಿ ತೀರ್ಪು ಪುನರ್ ಪರಿಶೀಲಿಸುವಂತೆ ಸಲ್ಲಿಸಿದ್ದ ಪ್ರಕರಣದ ಇತರೆ ಆರು ಅಪರಾಧಿಗಳ ಅರ್ಜಿಗಳನ್ನು ಸಹ ನ್ಯಾಯಾಲಯ ತಿರಸ್ಕರಿಸಿದೆ. ಯೂಸುಫ್ ಮೊಹ್ಸಿನ್ ನುಲ್ವಾಲಾ, ಖಲೀಲ್ ಮಹಮದ್ ಸೈಯದ್ ಅಲಿ ನಝೀರ್, ಮಹಮದ್ ದಾವೂದ್ ಯೂಸುಫ್ ಖಾನ್, ಶೇಖ್ ಆಸಿಫ್ ಯೂಸುಫ್, ಮುಜಾಮಿಲ್ ಉಮರ್ ಖದ್ರಿ ಮತ್ತು ಮಹಮದ್ ಅಹ್ಮದ್ ಶೇಖ್ ಎಂಬ 6 ಅಪರಾಧಿಗಳು ತಮ್ಮ ವಿರುದ್ಧದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದರು.

ಕಾನೂನಿನ ಪ್ರಕಾರ, ನ್ಯಾಯಾಲಯ ತೀರ್ಪು ನೀಡಿದ 30 ದಿನಗಳ ಒಳಗಾಗಿ ಪುನರ್‌ಪರಿಶೀನಾ ಅರ್ಜಿಯನ್ನು ಸಲ್ಲಿಸುವ ಅವಕಾಶವಿದೆ. ಗಡುವು ಮೀರಿದರೆ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸುವ ಸಾಧ್ಯತೆ ಇದೆ. ಕಳೆದ ಮಾರ್ಚ್ 21ರಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಜಯ್ ದತ್ ಅಪರಾಧಿ ಎಂದು ತೀರ್ಮಾನಿಸಿದ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.