ಈಗಿನ ಸುದ್ದಿ

ಬಿಜೆಪಿಯಿಂದ ಜೇಠ್ಮಲಾನಿ ಉಚ್ಛಾಟನೆ

ಬಿಜೆಪಿಯಿಂದ ಜೇಠ್ಮಲಾನಿ ಉಚ್ಛಾಟನೆ
Published On :

ನವದೆಹಲಿ: ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರುವ ರಾಮ್ ಜೇಠ್ಮಲಾನಿ ಅವರನ್ನು ಮಂಗಳವಾರ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ವಕೀಲರು ಕೂಡ ಆಗಿರುವ ಜೇಠ್ಮಲಾನಿ ಅವರನ್ನು ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ಉಚ್ಛಾಟಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಸಂಸದ ಅನಂತ್ ಕುಮಾರ್ ಅವರು ನಿನ್ನೆ ಜೇಠ್ಮಲಾನಿ ಅವರಿಗೆ ಉಚ್ಛಾಟನೆ ಕುರಿತ ಪತ್ರವನ್ನು ಬರೆದಿದ್ದು, ಪತ್ರದಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ತಮ್ಮನ್ನು ಉಚ್ಛಾಟಿಸಲು ಬಿಜೆಪಿ ಸಂಸದೀಯ ಸಮಿತಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ ಉಚ್ಛಾಟನೆ ಕುರಿತು ತಮಗೆ ಆಕ್ಷೇಪಗಳಿದ್ದರೆ ಅಥವಾ ಪ್ರಶ್ನೆಗಳಿದ್ದರೆ ಸಮಿತಿಯ ಮುಂದಿಡಬಹುದು ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯರಾಗಿರುವ ರಾಮ್ ಜೇಠ್ಮಲಾನಿ ಅವರು ಈ ಹಿಂದೆ ಬಿಜೆಪಿ ನಾಯಕತ್ವದ ಬಗ್ಗೆ ಚಕಾರ ಎತ್ತಿದ್ದರು. ಅಲ್ಲದೆ ಯುಪಿಎ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಮೃದುಧೋರಣೆ ತಳೆದಿದೆ ಎಂದು ಆರೋಪಿಸಿದ್ದರು.

ಇದೇ ಅಂಶವನ್ನು ಮುಂದಿಟ್ಟುಕೊಂಡು ಬಿಜೆಪಿ ಸಂಸದೀಯ ಸಮಿತಿ ಜೇಠ್ಮಲಾನಿ ಅವರನ್ನು ಉಚ್ಛಾಟಿಸಿದೆ. 2012ರಲ್ಲಿಯೂ ಕೂಡ ರಾಮ್ ಜೇಠ್ಮಲಾನಿ ಅವರು ಬಿಜೆಪಿ ಮಾಜಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಪಕ್ಷದಿಂದ 6 ತಿಂಗಳುಗಳ ಕಾಲ ಉಚ್ಛಾಟನೆಗೆ ಒಳಗಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.