ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ತೀವ್ರ

ರಾಯ್‌ಪುರ: ಛತ್ತೀಸ್ ಗಡದಲ್ಲಿ ನಡೆದ ನಕ್ಸಲ್ ನರಮೇಧವನ್ನು ಗಂಭೀರವಾಗಿ ಪರಗಣಿಸಿರುವ ಕೇಂದ್ರ ಸರ್ಕಾರ ನಕ್ಸಲ್ ನಿಗ್ರಹ ಕಾರ್ಯಾಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಮತ್ತಷ್ಟು ಭದ್ರತಾ ಪಡೆಗಳನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗುವುದು ಎಂದು ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಬಗ್ಗೆ ಮಂಗಳವಾರ ರಾಯ್‌ಪುರದಲ್ಲಿ ನಡೆದ ನಕ್ಸಲ್ ಪೀಡಿತ ರಾಜ್ಯಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಅವರು, 'ನಕ್ಸಲ್ ನರಮೇಧ ನಡೆದ ಛತ್ತೀಸ್‌ಗಡ ರಾಜ್ಯದ ಅಧಿಕಾರಿಗಳೊಂದಿಗೆ ಗೃಹ ಇಲಾಖೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದೆ. ಅಲ್ಲದೆ ದೇಶದ ವಿವಿಧ ನಕ್ಸಲ್ ಪೀಡಿತ ರಾಜ್ಯಗಳನ್ನೂ ಕೂಡ ನಾವು ಸಂಪರ್ಕ ಮಾಡುತ್ತಿದ್ದು, ಮಾಹಿತಿ ಸಂಗ್ರಹಿಸುತ್ತಿದ್ದೇವೆ. ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನೇಮಿಸಲಾಗಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅವರಿಗೆ ಪೂರೈಕೆ ಮಾಡಲಾಗುತ್ತಿದೆ' ಎಂದು ತಿಳಿಸಿದರು.
ಸಾರ್ವಜನಿಕರನ್ನು ತಾವು ಕೊಂದಿಲ್ಲ ಎಂಬ ನಕ್ಸಲರ ವಾದವನ್ನು ಅಲ್ಲಗಳೆದಿರುವ ಆರ್.ಕೆ ಸಿಂಗ್ ಅವರು, ಘಟನೆ ವೇಳೆಯಲ್ಲಿ ನಕ್ಸಲ್ ಹಿಟ್‌ಲಿಸ್ಟ್‌ನಲ್ಲಿ ಇಲ್ಲದ ಹತ್ತಾರು ಅಮಾಯಕರು ಸಾವಿಗೀಡಾಗಿದ್ದಾರೆ. ಅವರೆಲ್ಲರನ್ನೂ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗಿದ್ದು, ರಾಷ್ಟ್ರೀಯ ತನಿಖಾದಳ ಕೂಡ ತನಿಖೆ ನಡೆಸಲಿದೆ ಎಂದು ಅವರು ತಿಳಿಸಿದರು. ಅಲ್ಲದೆ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಸೈನಿಕರನ್ನು ಬಳಸಿಕೊಳ್ಳುವುದಿಲ್ಲ ಎಂದು ಆರ್.ಕೆ.ಸಿಂಗ್ ಸ್ಪಷ್ಟಪಡಿಸಿದರು.
ಕಳೆದ ಶನಿವಾರ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ರ್ಯಾಲಿಯನ್ನು ಹಮ್ಮಿಕೊಂಡಿತ್ತು. ರ್ಯಾಲಿಗೆ ಕಾಂಗ್ರೆಸ್ ಮುಖಂಡರಾದ ಮಹೇಂದ್ರ ಕರ್ಮಾ, ಮಾಜಿ ಕೇಂದ್ರ ಸಚಿವ ವಿ.ಸಿ. ಶುಕ್ಲಾ, ಸ್ಥಳೀಯ ಕಾಂಗ್ರೆಸ್ ಮುಖಂಡ ನಂದಕುಮಾರ್ ಅವರು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ವೇಳೆ ನೂರಾರು ಮಂದಿ ಶಸ್ತ್ರಸಜ್ಜಿತ ನಕ್ಸಲರು ಒಮ್ಮೆಲೆ ದಾಳಿ ಮಾಡಿ ಮಹೇಂದ್ರ ಕರ್ಮಾ ಅವರನ್ನು ಹತ್ಯೆ ಮಾಡಿದ್ದರು. ಅಲ್ಲದೆ ಸ್ಥಳೀಯ ಕಾಂಗ್ರೆಸ್ ಮುಖಂಡ ನಂದಕುಮಾರ್ ಮತ್ತು ಅವರ ಪುತ್ರ ದಿನೇಶ್ ಅವರನ್ನು ಅಪಹರಿಸಿ ಕೊಂದು ಹಾಕಿದ್ದರು. ನಕ್ಸಲರ ಈ ದಾಳಿಯಲ್ಲಿ ಸುಮಾರು 27 ಕ್ಕೂ ಅಧಿಕ ಮಂದಿ ಸಾವಿಗೀಡಾಗಿ, ಮಾಜಿ ಕೇಂದ್ರ ಸಚಿವ ವಿ.ಸಿ. ಶುಕ್ಲಾ ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


