ಶ್ರೀನಿವಾಸನ್ ರಾಜಿನಾಮೆ ಕೇಳಿದ ಕ್ರೀಡಾ ಇಲಾಖೆ

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ರಾಜಿನಾಮೆ ನೀಡುವಂತೆ ಭಾರತೀಯ ಕ್ರೀಡಾ ಇಲಾಖೆ ಕೇಳಿದೆ.
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಬಂಧನವಾಗುತ್ತಿದ್ದಂತೆಯೇ ಬಿಸಿಸಿಐ ಅಧ್ಯಕ್ಷರಾಗಿರುವ ಶ್ರೀನಿವಾಸನ್ ಅವರ ರಾಜಿನಾಮೆಗೆ ಒತ್ತಡಗಳು ಜೋರಾಗಿವೆ. ಇದೀಗ ಭಾರತೀಯ ಕ್ರೀಡಾ ಇಲಾಖೆ ಕೂಡ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿದೆ.
ಭಾರತೀಯ ಕ್ರೀಡಾ ಇಲಾಖೆ ಇಂದು ಬಿಡುಗಡೆ ಮಾಡಿರುವ ತನ್ನ ಪತ್ರಿಕಾ ಹೇಳಿಕೆಯಲ್ಲಿ ಆ ಅಂಶ ಬಹಿರಂಗಗೊಂಡಿದೆ. 'ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗಾಗಲೇ ತನಿಖೆ ನಡೆಸುತ್ತಿದ್ದು, ಪ್ರಕರಣದಲ್ಲಿ ಬಿಸಿಸಿಐ ಅಧ್ಯಕ್ಷರಾದ ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಪಾತ್ರ ಖಚಿತವಾಗಿದೆ. ಅಲ್ಲದೆ ಅವರ ಬಂಧನವೂ ಕೂಡ ಆಗಿದೆ. ಈ ಹಿನ್ನಲೆಯಲ್ಲಿ ಶ್ರೀನಿವಾಸನ್ ಅವರು ಪ್ರಕರಣದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಪಾರದರ್ಶಕ ತನಿಖೆಗೆ ಸಹಕರಿಸಬೇಕು ಎಂದು ಕ್ರೀಡಾ ಇಲಾಖೆ ಹೇಳಿದೆ. ಅಲ್ಲದೆ ಬೆಟ್ಟಿಂಗ್‌ಗೆ ಕಾನೂನು ಮಾನ್ಯತೆ ನೀಡುವ ಕುರಿತು ಕೇಂದ್ರಕ್ಕೆ ಯಾವುದೇ ಶಿಫಾರಸ್ಸು ಮಾಡಿಲ್ಲ ಎಂದು ಇಲಾಖೆ ಸ್ಪಷ್ಟ ಪಡಿಸಿದೆ.
ಈ ನಡುವೆ ನವದೆಹಲಿಯಲ್ಲಿ ಮಾತನಾಡಿದ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರು, 'ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರು ಪ್ರಕರಣದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ.
ಆದರೆ ಕ್ರೀಡಾ ಇಲಾಖೆಯ ಆಗ್ರಹಕ್ಕೆ ಮಣಿಯದ ಶ್ರೀನಿವಾಸನ್ ಅವರು, 'ತಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಬಿಸಿಸಿಐ ಈಗಾಗಲೇ ಒಂದು ಪ್ರತ್ಯೇಕ ತಂಡವನ್ನು ರಚಿಸಿದ್ದು, ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಜಯರಾಮ್ ಚೌಟಾ ಅವರಿಗೆ ತನಿಖೆಯ ಮೇಲುಸ್ತುವಾರಿ ವಹಿಸಲಾಗಿದೆ. ಅಲ್ಲದೆ ಈ ತನಿಖಾ ತಂಡದಲ್ಲಿ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ನ್ಯಾ.ಆರ್. ಬಾಲಸುಬ್ರಮಣಿಯನ್ ಮತ್ತು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಅವರು ಕಾರ್ಯ ನಿರ್ವಹಿಸಲ್ಲಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಇದುವರೆವಿಗೂ ಹಲವು ಬುಕ್ಕಿಗಳು ಮತ್ತು ಆಟಗಾರರು ಸೇರಿದಂತೆ ಒಟ್ಟು 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶ ಮೂಲದ ಇನ್ನೂ ಹತ್ತು ಆಟಗಾರರ ಮೇಲೆ ದೆಹಲಿ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದು, ಅವರ ವಿರುದ್ಧವೂ ವಿಚಾರಣೆ ನಡೆಸುವ ಕುರಿತು ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ. ಈ ಹತ್ತೂ ಆಟಗಾರರು ರಾಜಸ್ತಾನ ರಾಯಲ್ಸ್ ತಂಡದ ಆಟಗಾರರೆಂದು ತಿಳಿದು ಬಂದಿದ್ದು, ಪ್ರಸ್ತುತ ಭಾರತ ತಂಡದಲ್ಲಿರುವ ಆಟಗಾರರಾದ ಪ್ರವೀಣ್ ಕುಮಾರ್, ಸುರೇಶ್ ರೈನಾ, ಭುವನೇಶ್ವರ್ ಕುಮಾರ್ ಅವರು ಸೇರಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಕ್ರೀಡಾ ಇಲಾಖೆಯಲ್ಲಿ ಭ್ರಷ್ಟಾಚಾರ ನಿಗ್ರಹಕ್ಕಾಗಿ ವಿಶಿಷ್ಟ ಕಾನೂನು ರಚಿಸುವ ಅಗತ್ಯವಿದೆ.
ತನಿಖೆಗೂ ನನಗೂ ಸಂಬಂಧವಿಲ್ಲ, ನನ್ನ ರಾಜಿನಾಮೆ ಕೇಳಿಲ್ಲ: ಶ್ರೀನಿವಾಸನ್
ಸ್ಪಾಟ್ ಫಿಕ್ಸಿಂಗ್ ತನಿಖೆಗೂ ನನಗೂ ಯಾವುದೇ ಸಂಬಂಧವಿಲ್ಲ ಹಾಗೂ ಯಾರೂ ನನ್ನ ರಾಜಿನಾಮೆ ಕೇಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಹೇಳಿದ್ದಾರೆ.
ಮುಂಬೈಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸನ್ ಅವರು ಪ್ರಕರಣ ಕುರಿತು ಮಾತನಾಡಿದರು. ' ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಯಾವುದೇ ತನಿಖೆ ನಡೆಯುತ್ತಿಲ್ಲ. ಹೀಗಿರುವಾಗ ನಾನು ರಾಜಿನಾಮೆ ನೀಡುವುದಿಲ್ಲ ' ಎಂದು ಹೇಳಿದ್ದಾರೆ.
ಭಾರತೀಯ ಕ್ರೀಡಾ ಇಲಾಖೆಯ ಆಗ್ರಹವನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಶ್ರೀನಿವಾಸನ್, ಯಾರು ಕೂಡ ನನ್ನ ರಾಜಿನಾಮೆ ಕೇಳಿಲ್ಲ ಎನ್ನುವ ಮೂಲಕ ನುಣುಚಿಕೊಳ್ಳಲು ಯತ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


