ಈಗಿನ ಸುದ್ದಿ

ಬಿಸಿಸಿಐಗೆ ಎಚ್ಚರಿಕೆ ನೀಡಿದ್ದ ಐಸಿಸಿ?

ಬಿಸಿಸಿಐಗೆ ಎಚ್ಚರಿಕೆ ನೀಡಿದ್ದ ಐಸಿಸಿ?
Published On :

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಚೆನ್ನೈ ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಕುರಿತು, ಅಂತಾರಾಷ್ಟೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಈ ಹಿಂದೆಯೇ ಬಿಸಿಸಿಗೆ ಎಚ್ಚರಿಕೆ ನೀಡಿದ್ದ ಅಂಶ ಬಹಿರಂಗಗೊಂಡಿದೆ.

ಖಾಸಗಿ ಸುದ್ದಿ ವಾಹಿನಿಯೊಂದು ಈ ಅಂಶವನ್ನು ಬಹಿರಂಗಗೊಳಿಸಿದ್ದು, ಈ ಬಗ್ಗೆ ಸ್ವತಃ ಗುರುನಾಥ್ ಮೇಯಪ್ಪನ್ ಅವರು ಐಪಿಎಲ್ 6 ಪಂದ್ಯವೊಂದರ ಸಂದರ್ಭದಲ್ಲಿ ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಚರ್ಚಿಸಿದ್ದರು. ಈ ದೂರವಾಣಿ ಸಂಭಾಷಣೆಯ ದಾಖಲೆಯನ್ನು ವಾಹಿನಿ ವರದಿಯಾಗಿ ಪ್ರಸಾರ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಕಳೆದ ಏಪ್ರಿಲ್‌ನಲ್ಲಿಯೇ ಐಸಿಸಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಒ ಗುರುನಾಥ್ ಮತ್ತು ಬುಕ್ಕಿಗಳ ಸಂಪರ್ಕದ ಕುರಿತು ಬಿಸಿಸಿಐಗೆ ಎಚ್ಚರಿಕೆ ನೀಡಿ, ಈ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇದಕ್ಕೂ ಮೊದಲು ಅಂದರೆ ಐಪಿಎಲ್ ಸೀಸನ್ 6 ಆರಂಭವಾಗುವ ಮೊದಲೇ ಐಸಿಸಿ ಗುರುನಾಥ್ ಮತ್ತು ಬುಕ್ಕಿಗಳ ಸಂಪರ್ಕದ ಕುರಿತು ಬಿಸಿಸಿಐಗೆ ಮಾಹಿತಿ ನೀಡಿತ್ತು ಎಂದು ಖಾಸಗಿ ಸುದ್ದಿ ವಾಹಿನಿ ಹೇಳಿದೆ.

ಆದರೆ ವಾಹಿನಿಯ ವರದಿಯನ್ನು ಅಲ್ಲಗಳೆದಿರುವ ಬಿಸಿಸಿಐ, ಪ್ರಕರಣದ ಬಗ್ಗೆ ಐಸಿಸಿ ತನ್ನನ್ನು ಸಂಪರ್ಕಿಸಿರಲಿಲ್ಲ ಎಂದು ಹೇಳಿದೆ. ಈ ನಡುವೆ ಗುರುನಾಥ್ ಮೇಯಪ್ಪನ್ ಮತ್ತು ವಿಂದೂ ದಾರಾ ಸಿಂಗ್ ಅವರ ನಡುವಿನ ಸಂಭಾಷಣೆಯ ವಿವರ ಬಹಿರಂಗವಾಗುತ್ತಿದ್ದಂತೆಯೆ, ಬಿಸಿಸಿಐ ಜಂಟಿ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದಂತಹವು ಎಂದು ಹೇಳಿದರು.

ಶ್ರೀನಿವಾಸನ್ ರಾಜಿನಾಮೆಗೆ ಹೆಚ್ಚಿದ ಒತ್ತಡ
ಐಸಿಸಿ ಎಚ್ಚರಿಕೆಯ ವಿಚಾರ ಸುದ್ದಿವಾಹಿನಿಯಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಇತ್ತ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಪದಚ್ಯುತಿಗೆ ಕೇಳಿಬರುತ್ತಿರುವ ಆಗ್ರಹ ಜೋರಾಗಿದೆ. ನಿನ್ನೆಯಷ್ಟೇ ಗೋವಾ ಮತ್ತು ಅಸ್ಸಾಂ ಕ್ರಿಕೆಟ್ ಮಂಡಳಿಗಳು ಶ್ರೀನಿವಾಸನ್ ರಾಜಿನಾಮೆಗೆ ಆಗ್ರಹಿಸಿದ್ದವು. ಇದೀಗ ಕೆಲ ಹಿರಿಯ ಆಟಗಾರರು ಕೂಡ ಶ್ರೀನಿವಾಸನ್ ರಾಜಿನಾಮೆಗೆ ಪಟ್ಟು ಹಿಡಿದಿದ್ದಾರೆ.

ಗುರುನಾಥ್ ಮತ್ತು ವಿಂದೂ ನ್ಯಾಯಾಂಗ ಬಂಧನ ವಿಸ್ತರಣೆ
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿ ವಿಚಾರಣೆ ಎದುರಿಸುತ್ತಿರುವ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಸೋದರಳಿಯ ಮತ್ತು ಚೆನ್ನೈ ತಂಡದ ಮಾಜಿ ಸಿಇಒ ಗುರುನಾಥ್ ಮೇಯಪ್ಪನ್ ಮತ್ತು ಬಾಲಿವುಡ್ ನಟ ವಿಂದೂ ದಾರಾ ಸಿಂಗ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಜೂನ್ 3ರವರೆಗೆ ವಿಸ್ತರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.