ಈಗಿನ ಸುದ್ದಿ

ಕಾಂಗ್ರೆಸ್ ಕುಟುಂಬ ರಾಜಕಾರಣ ವಿರುದ್ಧ ಜೇಟ್ಲಿ ತೀವ್ರ ವಾಗ್ದಾಳಿ

ಕಾಂಗ್ರೆಸ್ ಕುಟುಂಬ ರಾಜಕಾರಣ ವಿರುದ್ಧ ಜೇಟ್ಲಿ ತೀವ್ರ ವಾಗ್ದಾಳಿ
Published On :

ಗ್ವಾಲಿಯರ್: ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ವಿರುದ್ದ ಬಿಜೆಪಿಯ ರಾಜ್ಯಸಭಾ ವಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು ವಾಗ್ದಾಳಿ ನಡೆಸಿದ್ದಾರೆ.

ಗ್ವಾಲಿಯರ್‌ನಲ್ಲಿ ನಡೆದ ಬಿಜೆಪಿ ಪಕ್ಷದ ಬೂತ್ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯಸಭೆಯ ವಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು, ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಅಲ್ಲದೆ ಈ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದರು. ಮುಂದಿನ ಯುಪಿಎ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಹೆಸರನ್ನು ಬಳಸದೆಯೇ ಅವರ ವಿರುದ್ಧ ಜೇಟ್ಲಿ ಪರೋಕ್ಷ ವಾಗ್ದಾಳಿ ನಡೆಸಿದರು.

'ಭಾರತದಲ್ಲಿ ಕುಟುಂಬ ಪ್ರಜಾಪ್ರಭುತ್ವವಿದೆಯೇ? ದೇಶವನ್ನು ಆಳುವ ನಾಯಕ ಒಂದು ನಿರ್ದಿಷ್ಟ ಕುಟುಂಬದಲ್ಲಿ ಮಾತ್ರ ಜನಿಸಿದವನಾಗಿರಬೇಕೆ? ನಾನು ಗಮನಿಸಿದಂತೆ ಭಾರತ ಕಂಡ ಅತ್ಯುನ್ನತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಎಲ್‌ಕೆ ಅಡ್ವಾಣಿ, ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತು ಡಾ.ರಮಣ್ ಸಿಂಗ್‌ರಂತಹ ಅನೇಕ ಪ್ರಮುಖ ನಾಯಕರು ಯಾವುದೇ ನಿರ್ದಿಷ್ಟ ಕುಟುಂಬಗಳಿಂದ ಗುರುತಿಸಿ ಕೊಂಡವರಲ್ಲ. ಹೀಗಿದ್ದರೂ ಅವರು ತಮ್ಮ ಕಠಿಣ ಪರಿಶ್ರಮದಿಂದ ದೇಶದ ಪ್ರಮುಖ ನಾಯಕರಾದರು' ಎಂದು ಜೇಟ್ಲಿ ಹೇಳಿದರು.

'ಭಾರತದ ರಾಜಕೀಯ ಇತಿಹಾಸದಲ್ಲಿಯೇ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ರೀತಿಯಲ್ಲಿ ಭ್ರಷ್ಟಾಚಾರ ನಡೆಸಿದ ಮತ್ತೊಂದು ಸರ್ಕಾರವಿಲ್ಲ. ಭ್ರಷ್ಟಾಚಾರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರ ವೈಫಲ್ಯವೇ ಕಾರಣ. ಅಲ್ಲದೆ ಸಿಂಗ್ ಅವರ ದೂರದೃಷ್ಟಿಯ ಕೊರತೆಯಿಂದಾಗಿ ಭಾರತದ ಅಭಿವೃದ್ಧಿ ದರ ಕೂಡ ಭಾರಿ ಪ್ರಮಾಣದಲ್ಲಿ ಕುಸಿತಕಂಡಿದೆ. ಐದು ವರ್ಷಗಳಲ್ಲಿಯೇ ಭಾರತದ ಅಭಿವೃದ್ದಿ ದರ ಶೇ.5ರಷ್ಟು ಕುಸಿತಗೊಂಡಿದೆ. ಇದರಿಂದ ದೇಶದ ಅಭಿವೃದ್ದಿಗೆ ಪ್ರಬಲ ಪೆಟ್ಟಾಗಿದೆ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

ಛತ್ತೀಸ್‌ಗಡ ನಕ್ಸಲ್ ದಾಳಿ ಕುರಿತು ಮಾತನಾಡಿದ ಜೇಟ್ಲಿ, ನಕ್ಸಲೀಯರ ದಾಳಿಯಲ್ಲಿ ಕಾಂಗ್ರೆಸ್ ಮುಖಂಡರು ಸಾವನ್ನಪ್ಪಿದ್ದಕ್ಕಾಗಿ ಕಾಂಗ್ರೆಸ್ ನಕ್ಸಲೀಯರ ವಿರುದ್ಧ ಪ್ರಬಲ ಕಾರ್ಯಾಚರಣೆ ನಡೆಸುತ್ತಿದೆ. ಇದು ನನಗೆ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ. ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ಮಣಿಶಂಕರ್ ಅಯ್ಯರ್ ಅವರು ವಿರೋಧದ ನಂತರವಷ್ಟೇ ಕೇಂದ್ರ ಸಚಿವ ಪಿ.ಚಿದಂಬರಂ ಅವರು ನಕ್ಸಲೀಯರು ದೇಶಕ್ಕೆ ಮಾರಕವಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಅಲ್ಲದೆ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆಗೆ ಸಂಪೂರ್ಣ ಬೆಂಬಲ ನೀಡಿದ ಏಕೈಕ ಸರ್ಕಾರವೆಂದರೆ ರಮಣ್ ಸಿಂಗ್ ಸರ್ಕಾರ ಎಂದು ಜೇಟ್ಲಿ ಹೇಳಿದರು.

ಅಂತೆಯೇ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ಕಾರ್ಯ ವೈಖರಿಯನ್ನು ಶ್ಲಾಘಿಸಿದ ಅವರು, ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ, ವಿದ್ಯುತ್ ಮತ್ತು ನೀರಿನ ಸಮರ್ಪಕ ನಿರ್ವಹಣೆ ಮಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರ ಅಭಿವೃದ್ದಿ ಕೆಲಸಗಳನ್ನು ಹೊಗಳಿದರು. ಒಟ್ಟಾರೆ ಮುಂಬರುವ 2014ರ ಚುನಾವಣೆಗೆ ಬಿಜೆಪಿ ಪಕ್ಷ ಈಗಾಗಲೇ ಸಿದ್ದತೆಗಿಳಿದಿದ್ದು, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.