ಈಗಿನ ಸುದ್ದಿ

ನನಗೆ ಕೊಟ್ಟ ಶಿಕ್ಷೆ ಅತಿಯಾಯಿತು: ಲಾಲು

ನನಗೆ ಕೊಟ್ಟ ಶಿಕ್ಷೆ ಅತಿಯಾಯಿತು: ಲಾಲು
Published On :

ರಾಂಚಿ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿರುವ ಶಿಕ್ಷೆ ಪ್ರಮಾಣ ಅತಿಯಾಯಿತು ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಹಗರಣ ಸಂಬಂಧ ರಾಂಚಿಯ ಬಿರ್ಸಾ ಮುಂಡಾ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ತೀರ್ಪಿನ ಕಲಾಪವನ್ನು ವೀಕ್ಷಿಸುತ್ತಿದ್ದ ಲಾಲು, ನ್ಯಾಯಾಧೀಶ ಪ್ರವಾಸ್ ಕುಮಾರ್ ಸಿಂಗ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ ನಂತರ ತಮಗೆ ನೀಡಿದ ಶಿಕ್ಷೆ ಅತಿಯಾಯಿತು. ದಯವಿಟ್ಟು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು.

ಇದಕ್ಕೂ ಮುನ್ನ ಶಿಕ್ಷೆ ಪ್ರಮಾಣದ ಕುರಿತು ತಮ್ಮ ವಾದ ಮಂಡಿಸಿದ್ದ ವಕೀಲ ಚಿತ್ತರಂಜನ್ ಸಿನ್ಹಾ ಅವರು, ಲಾಲು ಅವರಿಗೆ 65 ವರ್ಷಗಳಾಗಿದ್ದು, ವಯಸ್ಸಿನ ಆಧಾರದ ಮೇಲೆ ಕನಿಷ್ಟ ಶಿಕ್ಷೆ ನೀಡಬೇಕು ಮತ್ತು ಲಾಲೂ ಓರ್ವ ಸಚ್ಛಾರಿತ್ರ್ಯ ವ್ಯಕ್ತಿಯಾಗಿದ್ದು, ಕೇಂದ್ರದಲ್ಲಿ ರೇಲ್ವೆ ಸಚಿವರಾಗಿದ್ದ ಸಮಯದಲ್ಲಿ ಅವರ ಮೇಲೆ ಒಂದು ಸಣ್ಣ ಕಪ್ಪುಚುಕ್ಕೆ ಕೂಡ ಇರಲಿಲ್ಲ. ಅಲ್ಲದೆ ತಮ್ಮ ವಿರುದ್ಧ ಆರೋಪ ಬರುತ್ತಿದ್ದಂತೆಯೇ ತನಿಖಾಧಿಕಾರಿಗಳಿಗೆ ಎಲ್ಲ ರೀತಿಯ ದಾಖಲೆಗಳನ್ನು ನೀಡಿ ತನಿಖೆಗೆ ಸಹಕರಿಸಿದ್ದರು ಹೀಗಾಗಿ ಅವರ ಸನ್ನಡತೆಯನ್ನು ಗಮನದಲ್ಲಿಟ್ಟುಕೊಂಡು 3 ವರ್ಷಕ್ಕಿಂತ ಕಡಿಮೆ ಅವಧಿಯ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದರು.

ನ್ಯಾಯಾಧೀಶ ಪ್ರವಾಸ್ ಕುಮಾರ್ ಸಿಂಗ್ ಅವರು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ ನಂತರ  ಮಾಧ್ಯಮಗಳೊಂದಿಗೆ ಮಾತನಾಡಿದ ಲಾಲು ಪರ ವಕೀಲ ಚಿತ್ತರಂಜನ್ ಸಿನ್ಹಾ ಅವರು, ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಲಾಲು ಪ್ರಸಾದ್ ಅವರ ಪತ್ನಿ ರಾಬ್ಡಿದೇವಿ ಅವರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ನ್ಯಾಯಾಲಯದ ಹೊರಗಡೆ ಮಾತನಾಡಿದ ಆರ್‌ಜೆಡಿ ಪಕ್ಷದ ಮತ್ತೋರ್ವ ಮುಖಂಡ ರಘುವಂಶ ಪ್ರಸಾದ್ ಯಾದವ್ ಅವರು, "ಇಂದಿನ ತೀರ್ಪು ಅಂತಿಮವಲ್ಲ. ಇಂದಿನ ತೀರ್ಪಿನಿಂದ ನಾವು ವಿಚಲಿತರಾಗಿಲ್ಲ. ಲಾಲು ಪ್ರಸಾದ್ ಅವರು ಪಕ್ಷದ ನೇತಾರರಾಗಿದ್ದು, ತೀರ್ಪಿನ ವಿರುದ್ಧ ನಾವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇವೆ" ಎಂದು ಹೇಳಿದರು.

ಪ್ರಸ್ತುತ ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಲಾಲು ಪ್ರಸಾದ್ ಅವರು 2018ರವರೆಗೆ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಅಲ್ಲದೆ 2024ರವರೆಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಸೇರಿದಂತೆ ಮೇವು ಹಗರಣದ 45 ದೋಷಿಗಳಿಗೆ ಸಿಬಿಐ ವಿಶೇಷ ಕೋರ್ಟ್ ಗುರುವಾರ ಐದು ಹಂತಗಳಲ್ಲಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದು, ಲಾಲುಗೆ 5 ವರ್ಷ, ಜೆಡಿಯು ಸಂಸದ ಜಗದೀಶ್ ಶರ್ಮಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹೀಗಾಗಿ ತಕ್ಷಣದಿಂದಲೇ ಲಾಲು ಪ್ರಸಾದ್ ಯಾದವ್ ಹಾಗೂ ಜಗದೀಶ್ ಶರ್ಮಾ ಅವರ ಸಂಸದ ಸ್ಥಾನ ರದ್ದಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.