ಈಗಿನ ಸುದ್ದಿ

ವಾಯು ಸೇನೆಯಲ್ಲಿ ಯುದ್ಧ ವಿಮಾನಗಳ ಕೊರತೆ: ನ್ಯಾಕ್ ಬ್ರೌನ್

ವಾಯು ಸೇನೆಯಲ್ಲಿ ಯುದ್ಧ ವಿಮಾನಗಳ ಕೊರತೆ: ನ್ಯಾಕ್ ಬ್ರೌನ್
Published On :

ನವದೆಹಲಿ: ಭಾರತೀಯ ವಾಯು ಸೇನೆಯ ಬಳಿ ಸಾಕಷ್ಟು ಯುದ್ಧ ವಿಮಾನಗಳಿಲ್ಲ ಎಂದು ವಾಯು ಸೇನಾ ಮುಖ್ಯಸ್ಥ ನ್ಯಾಕ್ ಬ್ರೌನ್ ಹೇಳಿದ್ದಾರೆ.

ದೆಹಲಿಯಲ್ಲಿ ಆಯೋಜಿಸಲಾಗಿದ್ದ ವಾಯುಸೇನೆಯ ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಕ್ ಬ್ರೌನ್ ಅವರು, ವಾಯುಸೇನೆಯಲ್ಲಿ ಸಾಕಷ್ಟು ಬಲಿಷ್ಠ ಯುದ್ಧ ವಿಮಾನಗಳಿಲ್ಲ. 'ಪ್ರಸ್ತುತ ವಾಯುಸೇನೆ ಸಾಕಷ್ಟು ಯುದ್ಧ ವಿಮಾನಗಳ ಕೊರತೆ ಅನುಭವಿಸುತ್ತಿದ್ದು, ವಾಯುಪಡೆಯ ಯುದ್ಧ ವಿಮಾನಗಳ ಸಂಖ್ಯಾ ಸಾಮರ್ಥ್ಯ ಗಣನೀಯವಾಗಿ ಇಳಿಕೆಯಾಗಿದೆ ಎಂದು ಅವರು ಹೇಳಿದರು.

'12 ಮತ್ತು 13ನೇ(2012-2022) ಪಂಚವಾರ್ಷಿಕ ಯೋಜನೆಯಲ್ಲಿ ಘೋಷಣೆಯಾಗಿದ್ದ ಕಾರ್ಯಕ್ರಮದ ಅನ್ವಯದಂತೆ ವಾಯುಪಡೆಗೆ ಸುಮಾರು 42 ಫೈಟರ್ ಜೆಟ್ ದಳಗಳ ಅವಶ್ಯಕತೆ ಇದ್ದು, ಪ್ರಸ್ತುತ ವಾಯುಪಡೆಯ ಬಳಿ ಅಷ್ಟು ಪ್ರಮಾಣದ ಯುದ್ಧ ವಿಮಾನಗಳಿಲ್ಲ. ವಾಯು ದಳದಲ್ಲಿ ನಾವು ಒಂದು ನಿರ್ಧಿಷ್ಟ ಸಾಮರ್ಥ್ಯವನ್ನು ಮುಂದುವರೆಸಬೇಕಾದ್ದರಿಂದ ಯುದ್ಧ ವಿಮಾನಗಳನ್ನು ಕಾಯ್ದುಕೊಳ್ಳುವಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದೇವೆ.

ನಿಗದಿಯಂತೆ 12ನೇ ಪಂಚವಾರ್ಷಿಕ ಯೋಜನೆ ಪ್ರಕಾರ 2017ರ ವೇಳೆಗೆ ಬಹುಪಯೋಗಿ ಮಧ್ಯಮ ಗಾತ್ರದ ಯುದ್ಧ ವಿಮಾನ(ಎಂಎಂಆರ್‌ಸಿಎ-Medium Multi-Role Combat Aircraft)ಗಳು ವಾಯು ಸೇನೆಯಲ್ಲಿ ಸೇರ್ಪಡೆಯಾಗದಿದ್ದರೆ ನಮ್ಮ ಸಾಮರ್ಥ್ಯ ಮತ್ತಷ್ಟು ಕೆಳಗಿಳಿಯಲಿದೆ. ಆದ್ದರಿಂದ ದೇಶದ ಭದ್ರತಾ ಸಾಮರ್ಥ್ಯವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ವಾಯು ಸೇನೆಯು ನಿಗದಿತ ಸಾಮರ್ಥ್ಯವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇದೆ ಎಂದು ಬ್ರೌನ್ ಹೇಳಿದರು.

ಭಾರತೀಯ ವಾಯುಸೇನೆಯ ಸಾಮರ್ಥ್ಯವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ 12 ಮತ್ತು 13ನೇ ಪಂಚವಾರ್ಷಿಕ ಯೋಜನೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅದರನ್ವಯ 42 ನೂತನ ವಾಯುದಳಗಳನ್ನು ರಚಿಸಲಾಗಿದ್ದು, ಇದಕ್ಕಾಗಿ ಸುಮಾರು 126 ಫೈಟರ್ ಜೆಟ್ ವಿಮಾನಗಳನ್ನು ಖರೀದಿಸಲು ರಕ್ಷಣಾ ಇಲಾಖೆ ಮುಂದಾಗಿತ್ತು.

ಅದರಂತೆ 2012ರಲ್ಲಿ ಫ್ರೆಂಚ್ ಮೂಲದ ಡಸ್ಸಾಲ್ಟ್ ಏವಿಯೇಷನ್ ಸಂಸ್ಥೆ ಭಾರತೀಯ ವಾಯುಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ತನ್ನ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಭಾರತಕ್ಕೆ ರವಾನಿಸಲು ಒಪ್ಪಿಗೆ ನೀಡಿತ್ತು. ಆದರೆ ಉಭಯ ಸಂಸ್ಥೆಗಳ ನಡುವೆ ವ್ಯವಹರಿಸುತ್ತಿದ್ದ ವಾಯು ಸೇನೆಯ ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್ ಬಾಲ್ ಅವರ ನಿಧನದಿಂದಾಗಿ ಒಪ್ಪಂದಕ್ಕೆ ತೀವ್ರ ಹಿನ್ನಡೆಯಾಗಿದೆ.

ಹೃದಯಾಘಾತಕ್ಕೀಡಾಗಿದ್ದ ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್ ಅವರು ಕಳೆದ ಮಂಗಳವಾರ ಸಾವಿಗೀಡಾಗಿದ್ದರು. ಅವರ ಸ್ಥಾನವನ್ನು ತುಂಬಲು ಮತ್ತೋರ್ವ ಸೂಕ್ತ ವ್ಯಕ್ತಿಗಾಗಿ ರಕ್ಷಣಾ ಇಲಾಖೆ ಹುಡುಕಾಟ ನಡೆಸಿದ್ದು, ಶೀಘ್ರದಲ್ಲಿಯೇ ಸ್ಥಾನ ಭರ್ತಿಯಾಗುವ ವಿಶ್ವಾಸವಿದೆ ಎಂದು ನ್ಯಾಕ್ ಬ್ರೌನ್ ಹೇಳಿದ್ದಾರೆ. ಆದರೆ ನೂತನ ಕಾರ್ಯದರ್ಶಿಗಳು ಅಧಿಕಾರ ಸ್ವೀಕರಿಸಿದರು ಕೂಡ ಅವರು ಆ ಸ್ಥಾನದಲ್ಲಿ ನೆಲೆಗೊಳ್ಳುಲು ಕನಿಷ್ಟ 3ರಿಂದ 4 ತಿಂಗಳುಗಳಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.