ಈಗಿನ ಸುದ್ದಿ

ಸುಗ್ರೀವಾಜ್ಞೆ ನಿಭಾಯಿಸಿದ್ದು ಪ್ರಣಬ್, ರಾಹುಲ್ ಅಲ್ಲ: ಆಡ್ವಾಣಿ

ಸುಗ್ರೀವಾಜ್ಞೆ ನಿಭಾಯಿಸಿದ್ದು ಪ್ರಣಬ್, ರಾಹುಲ್ ಅಲ್ಲ: ಆಡ್ವಾಣಿ
Published On :

ನವದೆಹಲಿ: ವಿವಾದಿತ ಸುಗ್ರೀವಾಜ್ಞೆಯಿಂದ ಕೇಂದ್ರ ಸರ್ಕಾರಕ್ಕೆ ಅಂಟಬಹುದಾಗಿದ್ದ ಕಳಂಕವನ್ನು ತಡೆದಿದ್ದು ರಾಹುಲ್ ಗಾಂಧಿ ಅಲ್ಲ, ಬದಲಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.

ವಿವಾದಿತ ಸುಗ್ರೀವಾಜ್ಞೆಯ ಕುರಿತು ತಮ್ಮ ಬ್ಲಾಗ್‌ನಲ್ಲಿ ಬರೆದಿರುವ ಆಡ್ವಾಣಿ, ಸುಗ್ರೀವಾಜ್ಞೆಯಿಂದ ಕೇಂದ್ರದ ವಿರುದ್ಧ ಮೂಡಬಹುದಾದ ವಿರೋಧಿ ಅಲೆಯನ್ನು ತಡೆಯಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಹಲ್ ಗಾಂಧಿ ಅವರನ್ನು ಬಳಸಿಕೊಂಡಿದ್ದಾರೆಯೇ ಹೊರತು ರಾಹುಲ್ ತಾವಾಗಿಯೇ ಈ ಬಗ್ಗೆ ಮಾತನಾಡಿಲ್ಲ. ಹಾಗೆ ನೋಡಿದರೆ ನಿಜವಾಗಿಯೂ ಇಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿಯಂತ್ರಿಸಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು.

ಕಳಂಕಿತ ಜನಪ್ರತಿನಿಧಿಗಳನ್ನು ಅಮಾನತ್ತಿನಲ್ಲಿಡುವ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸುತ್ತಿದ್ದಂತೆಯೇ ದೇಶಾದ್ಯಂತ ಈ ಬಗ್ಗೆ ವಿರೋಧಿ ಅಲೆ ಎದ್ದಿತ್ತು. ಇದನ್ನು ಬೇಗನೆ ಅರ್ಥೈಸಿಕೊಂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ತಮ್ಮ ಪುತ್ರ ರಾಹುಲ್ ಗಾಂಧಿ ಅವರನ್ನು ಬಳಸಿಕೊಂಡು ಪಕ್ಷಕ್ಕಾಗಲಿದ್ದ ನಷ್ಟವನ್ನು ಕೊಂಚ ಮಟ್ಟಿಗೆ ತಗ್ಗಿಸುವ ಪ್ರಯತ್ನ ಮಾಡಿದ್ದಾರೆ.

ಸುಗ್ರೀವಾಜ್ಞೆ ಬಗ್ಗೆ ರಾಹುಲ್ ವಿವಾದ ಸೃಷ್ಟಿಸಲೆಂದೇ 'ಅಸಂಬದ್ಧ'(nonsense) ಎಂದು ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ನ ಪ್ರಭಾವಿ ನಾಯಕನೊಬ್ಬ ತನ್ನದೇ ಪಕ್ಷ ತೆಗೆದುಕೊಂಡ ನಿರ್ಣಯದ ವಿರುದ್ಧ ಇಂತಹ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ. 'ಅಸಂಬದ್ಧ' ಎನ್ನುವ ಬದಲು ಸರ್ಕಾರದ ನಿರ್ಣಯವನ್ನು ಪುನರ್ ಪರಿಶೀಲಿಸಬೇಕು ಎಂದಿದ್ದರೆ ಸಾಕಿತ್ತು. ಎಲ್ಲ ಮಾಧ್ಯಮಗಳು ರಾಹುಲ್ ಗಾಂಧಿ ಅವರ ಟೀಕೆಯಿಂದಲೇ ಕೇಂದ್ರ ಸರ್ಕಾರ ಈ ವಿವಾದಿತ ಸುಗ್ರೀವಾಜ್ಞೆಯನ್ನು ವಾಪಸ್ ಪಡೆದಿದೆ ಎನ್ನುವ ಧಾಟಿಯಲ್ಲಿ ವರದಿಗಳನ್ನು ಬಿತ್ತರಿಸುತ್ತಿವೆ. ನಿಜವಾಗಿಯೂ ಪರಿಸ್ಥಿತಿಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದು ರಾಹುಲ್ ಗಾಂಧಿ ಅಲ್ಲ, ಬದಲಿಗೆ ಪ್ರಣಬ್ ಮುಖರ್ಜಿ ಅವರು ಎಂದು ಆಡ್ವಾಣಿ ಹೇಳಿದ್ದಾರೆ.

ಅಂತೆಯೇ ಸುಗ್ರೀವಾಜ್ಞೆ ಕುರಿತಂತೆ ಪ್ರಣಬ್ ಮುಖರ್ಜಿ ತೆಗೆದುಕೊಂಡ ನಿಲುವಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಆಡ್ವಾಣಿ, ಸುಗ್ರೀವಾಜ್ಞೆಗೆ ಅಂಕಿತ ಹಾಕುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರವಾನಿಸಿದ್ದಾಗ, ತಿದ್ದುಪಡಿಗಾಗಿ ಪ್ರಣಬ್ ಅದನ್ನು ಸರ್ಕಾರಕ್ಕೆ ಮರಳಿಸಿದ್ದರು. ಇದರಿಂದ ಕೇಂದ್ರ ಸರ್ಕಾರ ತೀವ್ರ ಮುಜುಗರಕ್ಕೀಡಾಗಿತ್ತು. ಹೀಗಾಗಿಯೇ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಬಳಸಿಕೊಂಡಿತು ಎಂದು ಅವರು ಆರೋಪಿಸಿದ್ದಾರೆ.

ವಿವಾದಿತ ಸುಗ್ರೀವಾಜ್ಞೆ ಬಗ್ಗೆ ಕೇಂದ್ರದ ಯುಪಿಎ ಸರ್ಕಾರ ತೆಗೆದುಕೊಂಡ ನಿರ್ಣಯಗಳನ್ನು ತೀವ್ರವಾಗಿ ಖಂಡಿಸಿರುವ ಆಡ್ವಾಣಿ, ಇದನ್ನು ಯುಪಿಎ ಸರ್ಕಾರದ ಅಧಃಪತನ ಎಂದು ಕರೆದಿದ್ದಾರೆ.

ಒಟ್ಟಾರೆ ಕೇಂದ್ರ ಸರ್ಕಾರದ ಪ್ರಶ್ನಾರ್ಥಕ ಸುಗ್ರೀವಾಜ್ಞೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಈ ವಿವಾದಿತ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಬಾರದು ಎಂದು ಸ್ವತಃ ಎಲ್.ಕೆ.ಆಡ್ವಾಣಿ ಅವರು ನಿಯೋಗವೊಂದನ್ನು ರಾಷ್ಟ್ರಪತಿ ಭವನಕ್ಕೆ ಕರೆದೊಯ್ದು, ಸುಗ್ರೀವಾಜ್ಞೆಗೆ ಅಂಕಿತ ಹಾಕಬಾರದು ಎಂದು ಮನವಿ ಮಾಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.