ಹಿಮಾಲಯದಲ್ಲಿ ಭಾರಿ ಭೂಕಂಪನ?

ನವದೆಹಲಿ: ಹಿಮಾಲಯದಲ್ಲಿ ಭಾರಿ ಭೂಕಂಪನ ಸಂಭವಿಸುವ ಕುರಿತು ಭೂಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದು, 8ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಬಹುದು ಎಂದು ಹೇಳಲಾಗುತ್ತಿದೆ.
ಹಿಮಾಲಯದ ಇತಿಹಾಸದಲ್ಲಿಯೇ ಹಿಂದೆಂದೂ ಸಂಭವಿಸದ ರೀತಿಯಲ್ಲಿ ಭಾರಿ ಭೂಕಂಪನ ಉಂಟಾಗಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಎಚ್ಚರಿಕೆ ನೀಡಿದೆ. ಜಮ್ಮು ಮತ್ತು ಕಾಶ್ಮೀರ ದಿಂದ ಅರುಣಾಚಲ ಪ್ರದೇಶದವರೆಗೂ ಹರಡಿಕೊಂಡಿರುವ ಹಿಮಾಲಯ ರಾಜ್ಯಗಳಲ್ಲಿ ಭಾರಿ ಪ್ರಮಾಣ ವಿದ್ವಂಸಕ ಭೂಕಂಪನ ಸಂಭವಿಸಬಹುದು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಎಂ ಶಶಿಧರ್ ರೆಡ್ಡಿ ಹೇಳಿದ್ದಾರೆ.
ಹಿಮಾಲಯದ ತಪ್ಪಲಿನಲ್ಲಿ ಹುದುಗಿರುವ ಭೂಕಂಪನದ ಶಿಲೆಗಳು ಚುಟುವಟಿಕೆಯಿಂದ ಕೂಡಿದ್ದು, 1950ರಿಂದೀಚೆಗೆ ಸಂಭವಿಸದಿದ್ದ ರೀತಿಯ ಭಾರಿ ಭೂಕಂಪನ ಸಂಭವಿಸಬಹುದು ಎಂದು ಶಶಿಧರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. 'ನಮ್ಮ ಅಧ್ಯಯನದ ಪ್ರಕಾರ ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಭೂಕಂಪನದ ಶಿಲೆಗಳು ಚಟುವಟಿಕೆಯಿಂದ ಕೂಡಿದ್ದು, ಭಾರಿ ಭೂಕಂಪನದ ಮುನ್ನೆಚ್ಚರಿಕೆ ನೀಡುತ್ತಿವೆ. 8ರ ತೀವ್ರತೆಯ ಭೂಕಂಪನ ಉಂಟಾಗುವ ಸಾಧ್ಯತೆ ಇದ್ದು, ಇದು ಭಾರಿ ಪ್ರಮಾಣದ ವಿಧ್ವಂಸಕ್ಕೆ ಕಾರಣವಾಗಬಹುದು' ಎಂದು ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಭೂಕಂಪನ ಸಂಭವಿಸಿದರೆ 8 ಲಕ್ಷ ಮಂದಿಯ ಸಾವು ಖಚಿತ?
ಇದೇ ವೇಳೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಶಶಿಧರ್ ರೆಡ್ಡಿ ಅವರು ನೀಡಿರುವ ಎಚ್ಚರಿಕೆಯ ಅನ್ವಯ ಹಿಮಾಲಯದ ರಾಜ್ಯಗಳಲ್ಲಿ ಭೂಕಂಪನ ಸಂಭವಿಸಿದರೆ ಆ ಪ್ರದೇಶಗಳಲ್ಲಿ ವಾಸವಾಗುತ್ತಿರುವ ಜನರ ಮಾರಣ ಹೋಮವೇ ನಡೆಯುವ ಸಂಭವವಿದೆ. 8ರ ತೀವ್ರತೆಯ ಭೂಕಂಪನದಿಂದಾಗಿ ಸುಮಾರು 8ರಿಂದ 9ಲಕ್ಷ ಮಂದಿ ಪ್ರಾಣಾಪಾಯಕ್ಕೆ ಸಿಲುಕುವ ಸಂಭವವಿದೆ.
ಇಷ್ಟು ಪ್ರಮಾಣದಲ್ಲಿ ಭೂಕಂಪನ ಸಂಭವಿಸಿದರೆ ಭೂಮಿಯ ನೆಲ ಭಾರಿ ಪ್ರಮಾಣದಲ್ಲಿ ಬಾಯ್ತೆರೆದುಕೊಳ್ಳುತ್ತದೆ. ಅಲ್ಲದೆ ಭಾರಿ ಕಟ್ಟಡಗಳು ಬೆಟ್ಟಗುಡ್ಡಗಳು ನೆಲಸಮವಾಗುವುದರಲ್ಲಿ ಅನುಮಾನವೇ ಇಲ್ಲ. ಭೂಕಂಪನದಿಂದಾಗಿ ಕೇವಲ ಹಿಮಾಲಯದ ರಾಜ್ಯಗಳಿಗೆ ಮಾತ್ರವಲ್ಲದೆ ರಾಷ್ಟ್ರ ರಾಜಧಾನಿಗೂ ಅಪಾಯವಿದೆ ಎಂದು ತಿಳಿದು ಬಂದಿದೆ. ದೆಹಲಿ ಸುತ್ತಮುತ್ತಲಿನ 200 ಕಿಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಲಿದೆ ಎಂದು ತಿಳಿದುಬಂದಿದೆ.
ಹೀಗಾಗಿ ಈ ಭಾರಿ ಪ್ರಮಾಣದ ಭೂಕಂಪನದ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಸೇರಿದಂತೆ, ಅನೇಕ ಭೂಗರ್ಭ ಶಾಸ್ತ್ರಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಪ್ರಸ್ತುತ ಭೂಕಂಪನದ ಪರಿಣಾಮವನ್ನು 1897ರಲ್ಲಿ ಶಿಲ್ಲಾಂಗ್‌ನಲ್ಲಿ ನಡೆದಿದ್ದ ವಿನಾಶಕಾರಿ ಭೂಕಂಪನಕ್ಕೆ ತಜ್ಞರು ಹೋಲಿಸುತ್ತಿರುವುದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


