ಅರ್ಥೈಸಲು ಇಟಲಿ ಭಾಷೆಯಲ್ಲಿ ಹೇಳಲು ಸಿದ್ಧ: ಚಂದ್ರ ಬಾಬು ನಾಯ್ಡು

ನವದೆಹಲಿ: ಆಡಳಿತ ರೂಢ ಕಾಂಗ್ರೆಸ್ಗೆ ನಮ್ಮ ಪ್ರತಿಭಟನೆ ಅರ್ಥವಾಗದಿದ್ದರೆ ಅದನ್ನು ತಾವು ಇಟಲಿ ಭಾಷೆಯಲ್ಲೂ ಹೇಳಲು ಸಿದ್ಧ ಎಂದು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು ಕೇಂದ್ರ ಸರ್ಕಾರದ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಿರ್ಧಾರಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಪರೋಕ್ಷವಾಗಿ ಸೋನಿಯಾಗಾಂಧಿ ಅವರನ್ನು ಗುರಿಯಾಗಿಸಿಕೊಂಡ ನಾಯ್ಡು, ಪ್ರತ್ಯೇಕ ರಾಜ್ಯ ರಚನೆ ಕುರಿತಂತೆ ನಮ್ಮ ವಿರೋಧ ಮತ್ತು ಪ್ರತಿಭಟನೆ ಅವರಿಗೆ (ಕಾಂಗ್ರೆಸ್) ಅರ್ಥವಾಗದಿದ್ದರೆ ನಾನು ಇಟಲಿ ಭಾಷೆಯಲ್ಲಿ ಹೇಳಲು ಸಿದ್ಧನಿದ್ದೇನೆ ಎಂದು ಹೇಳಿದರು.
ಆಂಧ್ರಪ್ರದೇಶವನ್ನು ವಿಭಜಸಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಕರಡು ಪ್ರತಿ ರಚನೆಗೂ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟ ತಾರಕಕ್ಕೇರಿದ್ದು, ವಿಶಾಖ ಪಟ್ಟಣದಲ್ಲಿ ಕರ್ಫ್ಯೂ ಹೇರಲಾಗಿದೆ. ಅಲ್ಲದೆ ಅಖಂಡಾಂಧ್ರ ಪ್ರದೇಶ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದ 34 ಪ್ರತಿಭಟನಾಕಾರರನ್ನು ವಿಶಾಖಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾಕಾರರ ಬಿಸಿ ಬೇರೆ ರಾಜ್ಯದಗಳಿಗೂ ತಟ್ಟಿದ್ದು, ವಿವಿಧ ರಾಜ್ಯಗಳಿಂದ ಆಂಧ್ರಪ್ರದೇಶಕ್ಕೆ ತೆರಳುತ್ತಿದ್ದ ಸಾರಿಗೆ ವಾಹನಗಳು ಮತ್ತು ಸರಕು ಸಾಗಣೆ ವಾಹನಗಳು ಗಡಿ ಜಿಲ್ಲೆಗಳಲ್ಲೇ ಮೊಕ್ಕಾಂ ಹೂಡಿದ್ದು, ಚಾಲಕರು ಪರಿತಪಿಸುವಂತಾಗಿದೆ. ಸದಾ ಕಾಲ ಭಕ್ತರಿಂದ ತುಂಬಿ ತುಳುಕುತ್ತಿದ್ದ ಖ್ಯಾತ ಪುಣ್ಯಕ್ಷೇತ್ರ ತಿರುಪತಿಯಲ್ಲಿ ಇದೀಗ ನೀರವ ಮೌನ ಆವರಿಸಿದೆ.
ಭಕ್ತಾಧಿಗಳಿಲ್ಲಿದೆ ತಿರುಮಲ ದೇವಸ್ಥಾನ ಖಾಲಿ ಖಾಲಿ ಹೊಡೆಯುತ್ತಿದೆ. ಅಳಿದುಳಿದ ಭಕ್ತಾದಿಗಳು ಸಾರಿಗೆ ವ್ಯವಸ್ಥೆ ಇಲ್ಲದೆ ಒದ್ದಾಡುತ್ತಿದ್ದಾರೆ. ಕೆಲ ಭಕ್ತರು ನಡೆದುಕೊಂಡೇ ತಿರುಮಲದಿಂದ ತಿರುಪತಿಗೆ ಆಗಮಿಸುತ್ತಿದ್ದಾರೆ.
ಕತ್ತಲೆಯಲ್ಲಿ ಮುಳುಗಿದ ಆಂಧ್ರ ಪ್ರದೇಶ
ಇತ್ತ ಆಂಧ್ರ ವಿಭಜನೆಯನ್ನು ಖಂಡಿಸಿ ಅಖಂಡಾಂಧ್ರ ಹೋರಾಟಗಾರರು ನಡೆಸುತ್ತಿರುವ ಹೋರಾಟಕ್ಕೆ ಆಂಧ್ರ ಪ್ರದೇಶ ವಿದ್ಯುತ್ ಇಲಾಖೆಯ ನೌಕರರು ಕೈ ಜೋಡಿಸಿದ್ದು, ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನಿನ್ನೆಯಿಂದಲೇ ಕರೆ ನೀಡಿದ್ದಾರೆ. ಹೀಗಾಗಿ ವಿದ್ಯುತ್ ಇಲ್ಲದೆ ಇಡೀ ಆಂಧ್ರ ಪ್ರದೇಶ ಅಂಧಕಾರದಲ್ಲಿ ಮುಳುಗಿದೆ. ಸ್ವತಃ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರು ನೌಕರರನ್ನು ಓಲೈಸಲು ಯತ್ನಿಸಿದರೂ ಸಹ ನೌಕರರು ಮುಷ್ಕರ ವಾಪಸ್ ಪಡೆಯದೇ ಇರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ.
ದೆಹಲಿಯಲ್ಲಿ ಚಂದ್ರಬಾಬು ನಾಯ್ಡು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ
ಇತ್ತ ಹೈದರಾಬಾದ್ನಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಜಗನ್ ಮೋಹನ್ ರೆಡ್ಡಿ ಅವರು ಅಖಂಡಾಂಧ್ರಕ್ಕಾಗಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಬೆನ್ನಲ್ಲೇ, ಅತ್ತ ನವದೆಹಲಿಯಲ್ಲಿ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರು ಕೂಡ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರ ಕೂರುವುದಾಗಿ ಘೋಷಿಸಿದ್ದಾರೆ. ಇಂದಿನಿಂದಲೇ ತಾವು ಉಪವಾಸ ಕೂರುತ್ತಿದ್ದು, ಕೇಂದ್ರ ಸರ್ಕಾರ ತೆಲಂಗಾಣ ರಾಜ್ಯ ರಚನೆಯನ್ನು ಕೈಬಿಡುವವರೆಗೂ ತಾವು ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


