ಈಗಿನ ಸುದ್ದಿ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಚಿನ್ ವಿದಾಯ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಚಿನ್ ವಿದಾಯ
Published On :

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ವಿದಾಯ ಹೇಳಿದ್ದು, ತಮ್ಮ 200ನೇ ಟೆಸ್ಟ್ ನಂತರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸುವ ಸಾಧ್ಯತೆ ಇದೆ.

ಈಗಾಗಲೇ ಸಚಿನ್ ತೆಂಡೂಲ್ಕರ್ ಅವರು ತಮ್ಮ ವಿದಾಯದ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮಾಹಿತಿ ನೀಡಿದ್ದು, ತಮ್ಮ 200ನೇ ಟೆಸ್ಟ್ ಬಳಿಕ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ. ಸಚಿನ್ ತೆಂಡೂಲ್ಕರ್ ಈಗಾಗಲೇ ಟಿ-20 ಮತ್ತು ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ದು, ಕಳೆದ ಭಾನುವಾರ ರಾತ್ರಿ ನಡೆದ ಚಾಂಪಿಯನ್ಸ್ ಲೀಗ್ ಟಿ-20 ಸರಣಿಯ ಗೆಲುವಿನ ನಂತರ ದೇಶಿ ಮಾದರಿ ಕ್ರಿಕೆಟ್‌ಗೂ ಕೂಡ ಸಚಿನ್ ನಿವೃತ್ತಿ ಘೋಷಿಸಿದ್ದರು.

ತಮ್ಮ 16ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸಚಿನ್, ಮೊದಲ ಪಂದ್ಯದಲ್ಲಿಯೇ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಿದ್ದರು. ಸತತ 25 ವರ್ಷಗಳ ವೃತ್ತಿ ಜೀವನದಲ್ಲಿ ಸಚಿನ್ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 50000 ಸಾವಿರ ರನ್ ಗಳಿಸಿದ ವಿಶ್ವದ ಏಕೈಕ ಆಟಗಾರರಾಗಿದ್ದಾರೆ.

ತಮ್ಮ ಕ್ರಿಕೆಟ್ ವೃತಿ ಜೀವನದಲ್ಲಿ ಒಟ್ಟು 198 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್, 327 ಇನ್ನಿಂಗ್ಸ್ ಆಡಿ 15 837 ರನ್ ಗಳಿಸಿದ್ದಾರೆ. ಒಟ್ಟು 51 ಶತಕ ಮತ್ತು 67 ಅರ್ಧಶತಕಗಳನ್ನು ಗಳಿಸಿರುವ ಸಚಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ 53.86ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಸಚಿನ್ ಅವರ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್‌ವೊಂದರ ಅತ್ಯಧಿಕ ಮೊತ್ತ 248 ರನ್‌ಗಳು.

ಟ್ವಿಟರ್‌ನಲ್ಲಿ ನಿವೃತ್ತಿ ಘೋಷಣೆ

ತಮ್ಮ ಕ್ರಿಕೆಟ್ ಜೀವನಕ್ಕೆ ಬೇಸರದಿಂದಲೇ ವಿದಾಯ ಹೇಳಿರುವ ಸಚಿನ್, ತಮ್ಮ ಟ್ವಿಟರ್ ಖಾತೆಯಲ್ಲಿ ನಿವೃತ್ತಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. 'ನನ್ನ ಕ್ರಿಕೆಟ್ ಜೀವನದ ಸವಿನೆನಪುಗಳನ್ನು ಮೆಲುಕು ಹಾಕುವ ದಿನಗಳು ಸನಿಹವಾಗಿದ್ದು, ಇಷ್ಟು ವರ್ಷಗಳ ಕಾಲ ನನಗೆ ಸಹಕಾರ ನೀಡಿದ ಬಿಸಿಸಿಐಗೆ ಮತ್ತು ನನ್ನನ್ನು ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ನಾನು ಚಿರರುಣಿಯಾಗಿದ್ದೇನೆ. ಅಂತೆಯೇ ನನನ್ನು ಪ್ರೋತ್ಸಾಹಿಸಿ ಅಗತ್ಯ ಸಮಯದಲ್ಲಿ ಸಲಹೆ ನೀಡಿದ ನನ್ನ ಸಹ ಆಟಗಾರರಿಗೂ ಕೂಡ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಬಿಸಿಸಿಐಗೆ ಪತ್ರ ಬರೆದ ಸಚಿನ್

ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಬಿಸಿಸಿಐಗೆ ಪತ್ರ ಬರೆದಿರುವ ಸಚಿನ್, ಕ್ರಿಕೆಟ್‌ನಲ್ಲಿ ನಾನು ಕಂಡಿದ್ದ ಎಲ್ಲ ಕನಸುಗಳು ಸಾಕಾರಗೊಂಡಿದ್ದು,  ನನ್ನ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಬೇಸರವಾಗುತ್ತಿದೆ. ನನಗೆ ಸಹಕರಿಸಿದ ಬಿಸಿಸಿಐಗೆ ಮತ್ತು ನನ್ನ ಸಹ ಆಟಗಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ನಿವೃತ್ತಿಗೆ ಬಿಸಿಸಿಐ ಒತ್ತಡ ಕಾರಣ?

ಸಚಿನ್ ತೆಂಡೂಲ್ಕರ್ ಅವರ ನಿವೃತ್ತಿ ನಿರ್ಧಾರದ ಹಿಂದೆ ಬಿಸಿಸಿಐ ಧಣಿಗಳ ಕೈವಾಡದ ಶಂಕೆ ವ್ಯಕ್ತವಾಗುತ್ತಿದ್ದು, ಸಚಿನ್ ನಿವೃತ್ತಿಗಾಗಿಯೇ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಬಿಸಿಸಿಐ ಮೊಟಕುಗೊಳಿಸಿ, ಟೆಸ್ಟ್ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಭಾರತಕ್ಕೆ ಆಹ್ವಾನಿಸಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಭಾರತದ ಕ್ರಿಕೆಟ್ ದೇವರ ಆಟ ಅಂತ್ಯವಾಗಿದ್ದು, ವೆಸ್ಟ್ ಇಂಡೀಸ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಟೆಸ್ಟ್ ಸರಣಿಯೇ ಸಚಿನ್ ಅವರ ಪಾಲಿನ ಕೊನೆಯ ಕ್ರಿಕೆಟ್ ಪಂದ್ಯವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.