ಈಗಿನ ಸುದ್ದಿ

ಅಕ್ರಮ ಭೂಕಬಳಿಕೆ: ವಾದ್ರಾ ವಿರುದ್ಧದ ಅರ್ಜಿ ವಜಾ

ಅಕ್ರಮ ಭೂಕಬಳಿಕೆ: ವಾದ್ರಾ ವಿರುದ್ಧದ ಅರ್ಜಿ ವಜಾ
Published On :

ನವದೆಹಲಿ: ಅಕ್ರಮ ಭೂ ಕಬಳಿಕೆ ಪ್ರಕರಣ ಸಂಬಂಧ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ವಿರುದ್ಧ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

2005 ರಿಂದ 2012ರ ಸಮಯದಲ್ಲಿ ಹರ್ಯಾಣದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಎಂ.ಎಲ್ ಶರ್ಮಾ ಎಂಬುವವರು ರಾಬರ್ಟ್ ವಾದ್ರಾ ಅವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದರು. ಶರ್ಮಾ ಅವರು ತಮ್ಮ ಅರ್ಜಿಯಲ್ಲಿ ವಾದ್ರಾ ತಮ್ಮ ರಾಜಕೀಯ ವರ್ಚಸ್ಸನ್ನು ಬಳಸಿಕೊಂಡು ಅಕ್ರಮವಾಗಿ ಭೂಕಬಳಿಕೆ ಮಾಡುವ ಮೂಲಕ ಪಾತಕ ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ನ್ಯಾಯಾಲಯ, ಶರ್ಮಾ ಅವರ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೆ 'ವೈಯುಕ್ತಿಕ ದ್ವೇಷ, ಹಿತಾಸಕ್ತಿಗಳ ಮೂಲಕ ವ್ಯಕ್ತಿಯೊಬ್ಬರ ಹೆಸರನ್ನು ಹಾಳು ಮಾಡಲು ನ್ಯಾಯಾಲಯ ಅವಕಾಶ ಮಾಡಿಕೊಡುವುದಿಲ್ಲ. ವ್ಯಕ್ತಿಯೊಬ್ಬ ರಾಜಕಾರಣಿಗಳೊಂದಿಗೆ ಒಡನಾಟ ಹೊಂದಿದ ಮಾತ್ರಕ್ಕೆ ಅವನನ್ನು ಪಾತಕಿ ಎನ್ನಲು ಸಾಧ್ಯವಿಲ್ಲ'.

'ಅಲ್ಲದೆ ನೀವು ಅರ್ಜಿಯಲ್ಲಿ ನಮೂದಿಸಿರುವಂತೆ 2005 ಮತ್ತು 2012ರ ಸಮಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭೂ ಹಗರಣದಲ್ಲಿ ಹರ್ಯಾಣ ಸರ್ಕಾರವೇ ವಾದ್ರಾ ಅವರಿಗೆ ಭೂಮಿ ನೀಡಿದೆ. ಹೀಗಿರುವಾಗ ರಾಬರ್ಟ್ ವಾದ್ರಾ ಅವರನ್ನು ಮಾತ್ರ ಆರೋಪಿ ಎನ್ನಲು ಸಾಧ್ಯವಿಲ್ಲ. ನ್ಯಾಯಾಲಯ ಗಮನಿಸಿದಂತೆ ಅರ್ಜಿಯಲ್ಲಿ ಪರೋಕ್ಷವಾಗಿ ರಾಬರ್ಟ್ ವಾದ್ರಾ ಅವರನ್ನು ಮಾತ್ರ ಗುರಿಯಾಗಿಸಿಕೊಂಡಂತಿದೆ. ಹೀಗಾಗಿ ನೀವು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಬೇಕು' ಎಂದು ನ್ಯಾಯಾಲಯ ಸೂಚಿಸಿತು.

ನ್ಯಾಯಾಲಯದ ಸೂಚನೆಯ ಹಿನ್ನಲೆಯಲ್ಲಿ ವಕೀಲ ಎಂ.ಎಲ್ ಶರ್ಮಾ ಅವರು ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡರು. 2005 ರಿಂದ 2012ರ ಸಮಯದಲ್ಲಿ ಹರ್ಯಾಣ ಸರ್ಕಾರ ಮತ್ತು ರಾಬರ್ಟ್ ವಾದ್ರಾ ಅವರ ಸಂಸ್ಥೆಯ ನಡುವೆ ನಡೆದಿದ್ದ ಭೂವ್ಯವಹಾರ ವಿವಾದಕ್ಕೆ ಗ್ರಾಸವಾಗಿದೆ. ವಾದ್ರಾ ಭೂ ವ್ಯವಹಾರವು ಕಾನೂನಿನ ಮೂಲಕವೇ ನಡೆದಿದೆ ಎಂದು ಹರ್ಯಾಣ ಸರ್ಕಾರ ವಾದಿಸಿದರೂ ಕೂಡ, ಪ್ರಕರಣ ಸಂಬಂಧ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ನೀಡಿದ್ದ ವರದಿ ಇಡೀ ಭೂ ವ್ಯವಹಾರದ ಕುರಿತು ಅನುಮಾನದಿಂದ ನೋಡುವಂತೆ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.