ಈಗಿನ ಸುದ್ದಿ

ಕೋಮು ಸಂಘರ್ಷ: ಮುಜಾಫರ್ ನಗರ ಮತ್ತೆ ಉದ್ವಿಗ್ನ

ಕೋಮು ಸಂಘರ್ಷ: ಮುಜಾಫರ್ ನಗರ ಮತ್ತೆ ಉದ್ವಿಗ್ನ
Published On :

ಲಖನೌ: ಉತ್ತರ ಪ್ರದೇಶದ ಮುಜಾಫರ್ ನಗರ ಮತ್ತೆ ಉದ್ವಿಗ್ನಗೊಂಡಿದ್ದು, ಬುಧವಾರ ರಾತ್ರಿ ನಡೆದ ಗುಂಪುಘರ್ಷಣೆಯಲ್ಲಿ ಮೂವರು ಮೃತಪಟ್ಟಿದ್ದರ ಪರಿಣಾಮ ನಗರದಲ್ಲಿ ಮತ್ತೆ ಅಶಾಂತಿ ನೆಲೆಸುವಂತಾಗಿದೆ.

ಇತ್ತೀಚೆಗಷ್ಟೇ ಕೋಮುಗಲಭೆಯಿಂದ ತತ್ತರಿಸಿ ಹೋಗಿದ್ದ ಮುಜಾಫರ್ ನಗರದಲ್ಲಿ ಇದೀಗ ಮತ್ತೆ ಗುಂಪು ಘರ್ಷಣೆ ನಡೆದಿದ್ದು, ಬುಧವಾರ ರಾತ್ರಿ ನಡೆದ ಮೂವರ ಹತ್ಯೆ ಕೋಮು ಗಲಭೆಗೆ ಮುನ್ನುಡಿ ಬರೆದಿದೆ. ಅಂತೆಯೇ ಅದೇ ದಿನ ದಂಪತಿಗಳ ಮೇಲೆ ನಡೆದ ಹಲ್ಲೆ ಪ್ರಕರಣ ಕೂಡ ಪರಿಸ್ಥಿತಿಯನ್ನು ಮತ್ತುಷ್ಟು ಬಿಗಡಾಯಿಸುವಂತೆ ಮಾಡಿದೆ. ಬುಧವಾರ ರಾತ್ರಿ ಮುಜಾಫರನಗರದ ವೈಧ್ಯರೊಬ್ಬರನ್ನು ಭೇಟಿ ಮಾಡಿ ಹಸನ್‌ಪುರ-ಲಿಸಾದ್ ರಸ್ತೆಯಲ್ಲಿ ಮನೆಗೆ ವಾಪಸಾಗುತ್ತಿದ್ದ ದಂಪತಿಗಳ ಮೇಲೆ ಶಸ್ತ್ರಸಜ್ಜಿತ ಗುಂಪೊಂದು ದಾಳಿ ಮಾಡಿದೆ.

ಘಟನೆಯಲ್ಲಿ ಪತಿ ರಾಜೇಂದ್ರ ತೀವ್ರವಾಗಿ ಗಾಯಗೊಂಡಿದ್ದು, ಆತನ ಪತ್ನಿ ರೀನಾಳನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಈ ಅಂಶವನ್ನು ಸ್ವತಃ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿ ರಾಜೇಂದ್ರ ಅವರು ಬಹಿರಂಗಗೊಳಿಸಿದ್ದಾರೆ. ಇದೀಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದ್ದು, ಮೃತ ರೀನಾ ಅವರ ಸಂಬಂಧಿಕರು ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತುರ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಿಯೋ ರಾಜನಗರ ಅವರಿಗೆ ಸೂಚಿಸಿದ್ದಾರೆ.

ಪ್ರಸ್ತುತ ರಾಜನಗರ ಅವರು ಗಲಭೆ ಪೀಡಿತ ಮುಜಾಫರನಗರದಲ್ಲಿ ಮೊಕ್ಕಾಂ ಹೂಡಿದ್ದು, ಚುನಾವಣಾ ಆಯೋಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಐಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ವಿಶ್ವಕರ್ಮ ಅವರು ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮುಜಾಫರ್ ನಗರಕ್ಕೆ ವಾಪಸಾಗಿದ್ದಾರೆ.

ಗಲಭೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿಗಳು, ಬುಧವಾರ ರಾತ್ರಿ ಗುಂಪೊಂದು ದಂಪತಿಗಳ ಮೇಲೆ ಹಲ್ಲೆ ಮಾಡಿದ್ದು, ರಾಜೇಂದ್ರ ಅವರ ಪತ್ನಿ ರೀನಾರನ್ನು ಗುಂಡಿಟ್ಟು ಹತ್ಯೆಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. 'ಪ್ರಸ್ತುತ ಗಲಭೆಯ ಹಿಂದೆ ಕಾಣದ ಕೈಗಳ ಪಾತ್ರವಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲಿಯೇ ಅಪರಾಧಿಗಳನ್ನು ಬಂಧಿಸುತ್ತೇವೆ' ಎಂದು ಐಜಿಪಿ ವಿಶ್ವಕರ್ಮ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.