ಈಗಿನ ಸುದ್ದಿ

ಜೈಲಿನಿಂದ ಪರಾರಿಯಾಗಿದ್ದ ಸೈಕೋ ಜೈಶಂಕರ್ ಬಂಧನ

ಜೈಲಿನಿಂದ ಪರಾರಿಯಾಗಿದ್ದ ಸೈಕೋ ಜೈಶಂಕರ್ ಬಂಧನ
Published On :

ಬೆಂಗಳೂರು: ಕಳೆದ ಭಾನುವಾರ ಪರಪ್ಪನ ಅಗ್ರಹಾರ ಜೈಲಿನಿಂದ ಸಿನಿಮಿಯ ರೀತಿಯಲ್ಲಿ ಪರಾರಿಯಾಗಿದ್ದ ಸೈಕೋ ಕಿಲ್ಲರ್ ಜೈಶಂಕರ್‌ನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 1ರಂದು ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಸೈಕೋ ರೇಪಿಸ್ಟ್ ಜೈಶಂಕರ್ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದ ಪೊಲೀಸರು, ಇಂದು ಸಿಸಿಬಿ ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲು ಗೇಟ್‌ಬಳಿ ಶಂಕರ್‌ನನ್ನು ಬಂಧಿಸಲಾಗಿದೆ.

ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರು ಜೈಶಂಕರ್ ಬಂಧನವನ್ನು ದೃಢಪಡಿಸಿದ್ದು, ಶಂಕರ್ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಲಾಗಿತ್ತು ಎಂದು ಔರಾದ್ಕರ್ ಅವರು ತಿಳಿಸಿದ್ದಾರೆ.

ಕಿಲ್ಲರ್ ಜೈಶಂಕರ್ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಆತನ ಬಗ್ಗೆ ಸುಳಿವು ನೀಡಿದವರಿಗೆ 5 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಘೋಷಿಸಿದ್ದರು.

ಇಪ್ಪತ್ತಕ್ಕೂ ಹೆಚ್ಚು ಕೊಲೆ, ಅತ್ಯಾಚಾರ, ಡಕಾಯಿತಿ ಪ್ರಕರಣಗಳ ಆರೋಪಿ ಜೈಶಂಕರ ಅಲಿಯಾಸ್ ಸೈಕೋ ಶಂಕರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಾನುವಾರ ನಸುಕಿನಲ್ಲಿ ಪರಾರಿಯಾಗಿದ್ದ. ಭದ್ರತಾ ವೈಫಲ್ಯದ ಲಾಭ ಪಡೆದು ಜೈಶಂಕರ್ ಪರಾರಿಯಾಗಿದ್ದನು. ಮತ್ತೊಂದೆಡೆ ಭದ್ರತಾ ಸಿಬ್ಬಂದಿ ಪೈಕಿ ಕೆಲವರು ಆತನಿಗೆ ನೆರವಾಗಿರುವ ಅನುಮಾನವೂ ಇದೆ.

ಕಾರಾಗೃಹದ ಆಸ್ಪತ್ರೆಯ ನೆಲಮಾಳಿಗೆಯಲ್ಲಿರುವ ಮಾನಸಿಕ ಚಿಕಿತ್ಸಾ ವಿಭಾಗದ ವಿಶೇಷ ಸೆಲ್ಲರ್‌ನಲ್ಲಿದ್ದ ಸೈಕೋ ಶಂಕರ, ಕಾರಾಗೃಹದ ಪಶ್ಚಿಮ ಭಾಗದ, ಮೊನಚಾದ ಗಾಜಿನ ಚೂರುಗಳನ್ನು ಅಳವಡಿಸಿರುವ 30 ಅಡಿ ಎತ್ತರದ ಗೋಡೆ ಹತ್ತಿ ವಿದ್ಯುತ್ ಬೇಲಿಯನ್ನು ಹಾರಿ ಪರಾರಿಯಾಗಿದ್ದನು ಎಂಬುದು ಸಿಬ್ಬಂದಿ ವಿವರಣೆ. ಇದು ಒಬ್ಬನಿಂದ ಸಾಧ್ಯವೇ ಎಂಬ ಅನುಮಾನ ಮೂಡಿದೆ. ಪರಾರಿಯಾಗುವ ವೇಳೆ ಜೈಶಂಕರನಿಗೆ ಗಾಯಗಳಾಗಿವೆ. ಜೈಲಿನ ಗೋಡೆ ಹಾಗೂ ಕೆಳಗಿಳಿದ ಜಾಗದಲ್ಲಿ ರಕ್ತದ ಕಲೆ ಬಿದ್ದಿರುವುದರಿಂದ ಪೊಲೀಸರು ಈ ಅನುಮಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 20ಕ್ಕೂ ಹೆಚ್ಚು ಕೊಲೆ, ಅತ್ಯಾಚಾರ ಹಾಗೂ ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಜೈಶಂಕರನ ಮೇಲಿವೆ. ಈಗಾಗಲೇ ತಮಿಳುನಾಡಿನ ಸೇಲಂ ತ್ವರಿತಗತಿ ನ್ಯಾಯಾಲಯ ಹಾಗೂ ಚಿತ್ರದುರ್ಗದ ಹಿರಿಯೂರಿನ ನ್ಯಾಯಾಲಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ತಲಾ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನೂ ಹಲವು ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಜೈಶಂಕರನನ್ನು ನ್ಯಾಯಾಲಯ ವಿಚಾರಣೆಗೆ ಕರೆದೊಯ್ಯಲಾಗುತ್ತಿತ್ತು. ಅತ್ಯಾಚಾರ ಮಾಡಿ ಕೊಲೆ ಮಾಡುವುದು, ಪತಿ ಎದುರೇ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದು ಸೇರಿದಂತೆ ವಿಕೃತ ಕೃತ್ಯಗಳನ್ನು ಜೈಶಂಕರ ಎಸಗುತ್ತಿದ್ದ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಆಸ್ಪತ್ರೆಯ ನೆಲ ಮಳಿಗೆಯಲ್ಲಿರುವ ಮಾನಸಿಕ ಚಿಕಿತ್ಸಾ ಸೆಲ್ಲರ್‌ನಲ್ಲಿ ಜೈಶಂಕರನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

2011, ಮೇ 4ರಂದು ಬಿಜಾಪುರ ಜಿಲ್ಲೆ ಝಳಕಿ ಪೊಲೀಸರು ಜೈಶಂಕರನನ್ನು ಬಂಧಿಸಿದ್ದರು. ಬಳಿಕ ಕೊಲೆ ಪ್ರಕರಣದ ವಿಚಾರಣೆ ಸಂಬಂಧ ಚಿತ್ರದುರ್ಗ ಪೊಲೀಸರ ವಶಕ್ಕೆ ನೀಡಲಾಗಿತ್ತು. ಆತನ ವಿಕೃತ ಮನೋಸ್ಥಿತಿಗೆ ಚಿಕಿತ್ಸೆ ನೀಡಲು ಜೈಶಂಕರನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.