ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಕಾಂಗ್ರೆಸ್ ಕೊಡುಗೆ: ಸೋನಿಯಾ

ಮಂಡ್ಯ: ಮಂಡ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ 'ಕೃತಜ್ಞತಾ ಸಮಾವೇಶ'ದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು, ತಾವು ಭರವಸೆ ನೀಡಿದಂತೆ ಬಡ ಜನತೆಗೆ ಅಕ್ಕಿ ವಿತರಣೆ ಮಾಡುವ ಮೂಲಕ ತಮ್ಮ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಹೇಳಿದರು.
ಇಂದು ಮಂಡ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸೋನಿಯಾ ಗಾಂಧಿ ಅವರು ಅಪಾರ ಜನತೆಯನ್ನುದ್ದೇಶಿಸಿ ಮಾತನಾಡಿದರು. ಕನ್ನಡದಲ್ಲಿ ನಮಸ್ಕಾರ ಹೇಳುವ ಮೂಲಕ ಭಾಷಣ ಆರಂಭಿಸಿದ ಸೋನಿಯಾಗಾಂಧಿ ಅವರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಮತದರಾರರಿಗೆ ಕೃತಜ್ಞತೆ ಸಲ್ಲಿಸಿದರು. ಅಂತೆಯೇ ಉಪ ಚುನಾವಣೆಯಲ್ಲಿ ವಿಜೇತರಾದ ಸಂಸದೆ ರಮ್ಯಾ ಮತ್ತು ಡಿಕೆ ಸುರೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.
'ಈ ಗೆಲುವು ಕಾಂಗ್ರೆಸ್ ಮೇಲೆ ಜನತೆ ಇಟ್ಟಿರುವ ಭರವಸೆಯ ಪ್ರತೀಕವಾಗಿದ್ದು, ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸೋನಿಯಾ ಹೇಳಿದರು.
ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದ ಸೋನಿಯಾ, ಅನ್ನಭಾಗ್ಯ ಮತ್ತು ಕ್ಷೀರಭಾಗ್ಯ ಯೋಜನಗೆಳು ಸರ್ಕಾರ ಜನತೆಗೆ ನೀಡಿರುವ ಪ್ರಮುಖ ಕೊಡುಗೆಗಳಾಗಿದ್ದು, ಇಡೀ ಭಾರತ ಕರ್ನಾಟಕದ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದೇವೆ. ಹಾಲು ಪ್ರೋತ್ಸಾಹ ಧನ ಮತ್ತು ನಿರಾವರಿ ಯೋಜನೆಗಳ ಭರವಸೆಯನ್ನು ಈಡೇರಿಸಿದ್ದೇವೆ. ಅಂತೆಯೇ ಚುನಾವಣಾ ಪೂರ್ವದಲ್ಲಿ ನಾವು ಮತದಾರರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಕೇಂದ್ರದಲ್ಲಿಯೂ ಸಹ ನಾವು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ.
ಆಹಾರ ಭದ್ರತಾ ಮಸೂದೆಯು ಐತಿಹಾಸಿಕ ಯೋಜನೆಯಾಗಿದ್ದು, ಇದರಿಂದ ಭಾರತದಲ್ಲಿರುವ ಕೋಟ್ಯಂತರ ಬಡ ಜನತೆಯ ಹೊಟ್ಟೆ ತುಂಬುತ್ತದೆ. ಮಸೂದೆಯಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಕರ್ನಾಟಕದ ಬಹುತೇಕ ಜನರು ಯೋಜನೆಯ ಸಂಪೂರ್ಣ ಫಲಾನುಭವಿಗಳಾಗಲಿದ್ದಾರೆ.
ರೈತರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶೀಘ್ರದಲ್ಲಿಯೇ ಅವುಗಳನ್ನು ಜಾರಿಗೊಳಿಸುತ್ತೇವೆ. ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸದಾ ಸಿದ್ಧವಿದ್ದು, ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ಮುಂಬರುವ ಲೋಕಸಭಾ ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಜಯಗಳಿಸಲಿದ್ದು, ಕಾಂಗ್ರೆಸ್ ತಾನು ಕೊಟ್ಟು ಮಾತನ್ನು ನಡೆಸಿಕೊಡಲಿದೆ ಎಂದು ಸೋನಿಯಾ ಹೇಳಿದರು.
ಇಂದು ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೃತಜ್ಞತಾ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕ ಮೇಲುಸ್ತುವಾರಿ ದಿಗ್ವಿಜಯ ಸಿಂಗ್ ಅವರು ಸೇರಿದಂತೆ ರಾಜ್ಯದ ಪ್ರಮುಖ ನಾಯಕರುಗಳಾದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಂಡ್ಯ ಸಂಸದೆ ರಮ್ಯಾ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಡಿ.ಕೆ ಸುರೇಶ್, ಶಾಸಕ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿಪರಮೇಶ್ವರ ಅವರು ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಸಮಾವೇಶದ ಆರಂಭದಲ್ಲಿ ಮಾತನಾಡಿದ ಸಂಸದೆ ರಮ್ಯಾ ಅವರು ತಮ್ಮನ್ನು ಸಂಸದರಾಗಿ ಆಯ್ಕೆ ಮಾಡಿದ ಮಂಡ್ಯ ಜನತೆಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. 'ತಾವು ಓರ್ವ ಹೆಣ್ಣಾಗಿದ್ದು ಮತ್ತೊಂದು ಹೆಣ್ಣಿನ ಮನಸ್ಸನ್ನು ಅರಿಯಬಲ್ಲೆ. ಚುನಾವಣೆ ವೇಳೆ ನನ್ನ ತಂದೆ ಸಾವಿಗೀಡಾಗಿದ್ದರು. ಆಗ ನಾನು ಪ್ರಚಾರದಿಂದ ದೂರವುಳಿದಿದ್ದೆ. ಆದರೂ ಕೂಡ ಮಂಡ್ಯ ಜನತೆ ನನ್ನ ಮೇಲೆ ಭರವಸೆ ಇಟ್ಟು, ನನ್ನ ಸಂಸದೆಯಾಗಿ ಆರಿಸಿದ್ದಾರೆ. ಇದಕ್ಕಾಗಿ ನಾನು ಚಿರರುಣಿ ಎಂದು ಹೇಳಿದರು.
ನಂತರ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಮಾತನಾಡಿ, ಚುನಾವಣಾ ಪೂರ್ವದಲ್ಲಿ ಸೋನಿಯಾ ಗಾಂಧಿ ಅವರು ಹೇಳಿದ್ದಂತೆ ನಾವು ಒಗ್ಗಟ್ಟಿನಿಂದಾಗಿ ಕೆಲಸ ಮಾಡಿದ್ದೇವೆ. ಚುನಾವಣೆ ಗೆಲುವಿಗೆ ಸೋನಿಯಾ ಗಾಂಧಿ ಅವರು ನೀಡಿದ್ದ ಮಾರ್ಗದರ್ಶನ ಬಹಳ ಸಹಕಾರಿಯಾಗಿತ್ತು. ಜನತೆ ಕಾಂಗ್ರೆಸ್ ಮೇಲೆ ಭರವಸೆ ಇಟ್ಟು, ನಮ್ಮ ಅಭ್ಯರ್ಥಿಗಳನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇದಾದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಬಿಜೆಪಿ ಮತ್ತು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತಾವು ಈಗಾಗಲೇ ಪ್ರಧಾನಿಯಾದಂತೆ ಭಾವಿಸಿದಂತಿದೆ. ಕರ್ನಾಟಕದ ಜನತೆ ಕೋಮುವಾದಿಗಳನ್ನು ಮತ್ತು ನರೇಂದ್ರ ಮೋದಿ ಅವರನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಮಣಿಸಲೇ ಬೇಕು ಎಂದು ಜೆಡಿಎಸ್‌ನೊಂದಿಗೆ ಬಿಜೆಪಿ ಕೈಜೋಡಿಸಿತ್ತು.
ಆದರೆ ಜನತೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಭರವಸೆ ಇಟ್ಟು ಅತಿ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಇದಕ್ಕಾಗಿ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


