ಈಗಿನ ಸುದ್ದಿ

ಪ್ರಚೋದನಕಾರಿ ಭಾಷಣ: ಇಮ್ರಾನ್ ಮಸೂದ್‌ಗೆ ಜಾಮೀನು

ಪ್ರಚೋದನಕಾರಿ ಭಾಷಣ: ಇಮ್ರಾನ್ ಮಸೂದ್‌ಗೆ ಜಾಮೀನು
Published On :

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್‌ಗೆ ಬುಧವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಉತ್ತರ ಪ್ರದೇಶದ ಸಹರನ್‌ಪುರದಲ್ಲಿ ಮುಸ್ಲಿಂ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಮ್ರಾನ್ ಮಸೂದ್ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ತುಂಡುತುಂಡಾಗಿ ಕತ್ತರಿಸಿ ಹಾಕುತ್ತೇನೆ ಎಂದು ಹೇಳಿದ್ದರು. ಈ ಕಾರ್ಯಕ್ರಮದ ವಿಡಿಯೋ ತುಣುಕುಗಳು ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಉತ್ತರ ಪ್ರದೇಶದ ಬಿಜೆಪಿ ಘಟಕ ಪೊಲೀಸ್ ಠಾಣೆ ಮತ್ತು ಚುನಾವಣಾ ಆಯೋಗದ ಬಳಿ ದೂರು ಸಲ್ಲಿಸಿತ್ತು. ಚುನಾವಣಾ ಆಯೋಗದ ನಿರ್ದೇಶನದಂತೆ ಸಹರನ್ ಪುರ ಪೊಲೀಸರು ಕಳೆದ ಮಾರ್ಚ್ 29ರಂದು ಇಮ್ರಾನ್ ಮಸೂದ್ ಅವರನ್ನು ಬಂಧಿಸಿ, ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.

ನ್ಯಾಯಾಲಯ ಇಮ್ರಾನ್ ಮಸೂದ್‌ರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಇಮ್ರಾನ್ ಮಸೂದ್‌ಗೆ ಷರತ್ತು ಬದ್ಧ ಜಾಮೀನು ನೀಡಿದೆ.

ಇದಕ್ಕೂ ಮೊದಲು ತಮ್ಮ ವಾದ ಮಂಡಿಸಿದ ಮಸೂದ್ ಪರ ವಕೀಲರು, ದೂರಿಗೆ ಕಾರಣವಾಗಿರುವ ದೃಶ್ಯಾವಳಿಯ ಕುರಿತು ತಮಗೆ ಅನುಮಾನವಿದ್ದು, ಇದು ಹಳೆಯ ದೃಶ್ಯಾವಳಿಯಾಗಿದೆ. ಕಳೆದ ಸೆಪ್ಟೆಂಬರ್ 18ರಂದು ನಡೆದಿದ್ದ ಈ ಘಟನೆಗೂ ಪ್ರಸ್ತುತ ಘಟನೆಗಳಿಗೂ ಸಾಮ್ಯತೆ ಇದೆ. ಹೀಗಾಗಿ ಎರಡೂ ದೃಶ್ಯಾವಳಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಬೇಕು ಎಂದು ಹೇಳಿದರು.

ಬಿಜೆಪಿ ಕ್ಷಮೆಗೆ ಆಗ್ರಹಿಸಿದ ಕಾಂಗ್ರೆಸ್
ಇದೇ ವೇಳೆ ಇಮ್ರಾನ್ ಮಸೂದ್ ಅವರ ಭಾಷಣ ಕುರಿತು ದೂರು ದಾಖಲಿಸಿದ್ದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಬಿಜೆಪಿ ಪಕ್ಷ ಈ ಕೂಡಲೇ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಘಟನೆ ಕುರಿತು ಬಿಜೆಪಿ ದುರುದ್ದೇಶ ಪೂರ್ವಕವಾಗಿ ದೂರು ದಾಖಲಿಸಿದೆ. ಇಮ್ರಾನ್ ಮಸೂದ್ ಅವರು ಆ ಭಾಷಣ ಮಾಡುವಾಗ ಅವರು ಸಮಾಜವಾದಿ ಪಕ್ಷದಲ್ಲಿದ್ದರು. ಆದರೆ ಈಗ ಅವರು ಕಾಂಗ್ರೆಸ್ ಪಕ್ಷ ಸೇರಿದ್ದು, ಪಕ್ಷದ ತೇಜೋವಧೆ ಮಾಡಲೆಂದೇ ಬಿಜೆಪಿ ದೂರುದ್ದೇಶ ಪೂರಿತ ದೂರು ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.