ಮೋದಿ ಪ್ರಧಾನಿಯಾದರೆ ಮುಲಾಯಂ ಸರ್ಕಾರ ವಜಾ

ಲಖನೌ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಉತ್ತರ ಪ್ರದೇಶ ಸರ್ಕಾರವನ್ನು ವಜಾ ಮಾಡಲಾಗುತ್ತದೆ ಎಂದು ಗುಜರಾತ್ ಮಾಜಿ ಸಚಿವ ಮತ್ತು ಮೋದಿ ಆಪ್ತ ಅಮಿತ್ ಶಾ ಹೇಳಿದ್ದಾರೆ.
ಬಿಜ್ನೋರ್ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಕೋಮು ಗಲಭೆ ಕುರಿತಂತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಗಲಭೆಯಲ್ಲಿ ಹಾನಿಗೊಳಗಾದ ಜಾತ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯ ಆಹಾರ ಮತ್ತು ನಿದ್ರೆ ಇಲ್ಲದಿದ್ದರೂ ಬದುಕ ಬಲ್ಲ. ಆದರೆ ತನಗಾದ ಅವಮಾನವನ್ನು ಸಹಿಸಿಕೊಂಡು ಆತ ಬದುಕಲಾರ. ಅವಮಾನಕ್ಕೆ ಪ್ರತೀಕಾರ ಪಡೆಯುವ ಕಾಲ ಸನ್ನಿಹಿತವಾಗಿದೆ. ರಾಜ್ಯದ ಜನತೆಗೆ ಮುಲಾಯಂ ಮತ್ತು ಅಖಿಲೇಶ್ ಸರ್ಕಾರದ ವಿರುದ್ಧ ಸೇಡುತೀರಿಸಿಕೊಳ್ಳುವಂತಿದ್ದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಅಮಿತ್ ಶಾ ಮನವಿ ಮಾಡಿದರು.
'ಕತ್ತಿ ಮತ್ತು ಬಿಲ್ಲು ಬಾಣಗಳನ್ನು ಹಿಡಿದು ಹೋರಾಡಲು ನಾವೇನು ಮೋಘಲ್ ಸಾಮ್ರಾಜ್ಯದಲ್ಲಿಲ್ಲ. ಮುಜಾಫರನಗರ ಕೋಮುಗಲಭೆಯಲ್ಲಿ 65 ಅಮಾಯಕ ಮುಗ್ದರು ಪ್ರಾಣ ಕಳೆದುಕೊಂಡು, 50 ಸಾವಿರಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ. ಗಲಭೆ ಕುರಿತಂತೆ ಜನರಿಗೆ ಈ ವರೆಗೂ ನ್ಯಾಯದೊರೆತಿಲ್ಲ. ಹೀಗಾಗಿ ಮುಲಾಯಂ ಸಿಂಗ್ ಯಾದವ್ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಈಗ ಸೂಕ್ತ ಸಮಯ ಬಂದಿದೆ. ಜನತೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಬಿಜೆಪಿಯನ್ನು ಬೆಂಬಲಿಸಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಅಮಿತ್ ಶಾ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಉತ್ತರ ಪ್ರದೇಶದ 'ಮುಲ್ಲಾ ಮುಲಾಯಂ' ಸರ್ಕಾರವನ್ನು ವಜಾ ಮಾಡಲಾಗುತ್ತದೆ ಎಂದು ಶಾ ಹೇಳಿದರು.
ವಿವಾದಕ್ಕೆ ಕಾರಣವಾದ ಶಾ ಹೇಳಿಕೆ
ಮುಜಾಫರನಗರ ಕೋಮು ಗಲಭೆ ಕುರಿತಂತೆ ನರೇಂದ್ರ ಮೋದಿ ಆಪ್ತ ಅಮಿತ್ ಶಾ ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿವಿಧ ರಾಜಕೀಯ ಮುಖಂಡರು ಶಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಯು ಮುಖ್ಯಸ್ಥ ಕೆ.ಸಿ.ತ್ಯಾಗಿ ಅವರು ಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಅವರು ಮಾತನಾಡಿ, ಅಮಿತ್ ಶಾ ಅವರ ಹೇಳಿಕೆ ಜಾತ್ ಸಮುದಾಯವನ್ನು ಎತ್ತಿಕಟ್ಟುವಂತಿದ್ದು, ಕಾನೂನಿನ ಅನ್ವಯ ಅವರ ವಿರುದ್ಧ ದೂರು ದಾಖಲಿಸಬಹುದಾಗಿದೆ. ಇಂತಹ ಹೇಳಿಕೆಗಳನ್ನು ಕ್ರಿಮಿನಲ್ ಅಪರಾಧಗಳೆಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


