ಮೋದಿ ಪ್ರಧಾನಿಯಾದರೆ ಗಂಭೀರ ಪರಿಣಾಮ: ಚಿದು

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಭಾರತ ದೇಶ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ನವದೆಹಲಿಯಲ್ಲಿ ಆಯೋಜನೆಗೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿದಂಬರಂ ಅವರು, 2002ರ ಗೋದ್ರಾ ನರಮೇಧ ಕುರಿತಂತೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 2002 ಗುಜರಾತ್ ಕೋಮುಗಲಭೆಗೆ ನರೇಂದ್ರ ಮೋದಿ ಅವರೇ ಕಾರಣ. ಅವರು ದೇಶದ ಮುಂದಿನ ಪ್ರಧಾನಿಯಾದರೆ ದೇಶದ ಜನತೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
ಮೋದಿ ಕುರಿತಂತೆ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಆಡಿರುವ ಮಾತುಗಳು ಸತ್ಯವಾಗಿದ್ದು, ಮೋದಿ ಓರ್ವ ಉತ್ತಮ ಈವೆಂಟ್ ಮ್ಯಾನೇಜರ್ ಆಗಬಹುದೇ ಹೊರತು, ಉತ್ತಮ ಪ್ರಧಾನಿಯಾಗಲು ಸಾಧ್ಯವಿಲ್ಲ. ಆದರೆ ಬಿಜೆಪಿ ಪಕ್ಷ ನರೇಂದ್ರ ಮೋದಿ ಅವರನ್ನೇ ತಮ್ಮ ಪ್ರಮುಖ ನಾಯಕರೆಂಬಂತೆ ಬಿಂಬಿಸುತ್ತಿದೆ. ಇದರಿಂದ ಬಿಜೆಪಿ ಪಕ್ಷ ಭವಿಷ್ಯದಲ್ಲಿ ಭಾರಿ ದಂಡ ತೆರಲಿದೆ ಎಂದು ಚಿದಂಬರಂ ಹೇಳಿದರು.
ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ಚಿದಂಬರಂ ಅವರು, ಜಯಲಲಿತಾ ಅವರು ಬಿ ಟೀಮ್(ಬಿಜೆಪಿ)ನಲ್ಲಿ ಗುರುತಿಸಿಕೊಂಡಿದ್ದಾರೆ. ನರೇಂದ್ರ ಮೋದಿ ಅವರೊಂದಿಗೆ ಅವರು ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನಾನು ಗಮನಿಸಿದಂತೆ ಜಯಲಲಿತ ಮತ್ತು ಬಿಜೆಪಿ ಪಕ್ಷದ ಚಿಂತನಾ ಶೈಲಿ ಎರಡೂ ಒಂದೇ ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸೇತುಸಮುದ್ರಂ ಕುರಿತ ಅಭಿಪ್ರಾಯಗಳೇ ಸಾಕ್ಷಿ ಎಂದು ಚಿದಂಬರಂ ಹೇಳಿದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಚಿದಂಬರಂ ಅವರು ಸ್ಪರ್ಧಿಸದಿದ್ದರೂ ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಮಗ ಕಾರ್ತಿ ಚಿದಂಬರಂ ಅವರನ್ನು ಕಣಕ್ಕಿಳಿಸಿದ್ದಾರೆ. ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಕಾರ್ತಿ ಚಿದಂಬರಂ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಕಣಕ್ಕಿಳಿದಿದ್ದಾರೆ. ತಮ್ಮ ಪುತ್ರನ ಸ್ಪರ್ಧೆಯನ್ನು ಸಮರ್ಥಿಸಿಕೊಂಡಿರುವ ಚಿದಂಬರಂ ಅವರು, ಕಾರ್ತಿ ಸ್ಪರ್ಧೆ ನನ್ನ ನಿರ್ಧಾರವಲ್ಲ. ಇದು ಕಾಂಗ್ರೆಸ್ ಪಕ್ಷದ ನಿರ್ಧಾರ. ಯುವ ಅಭ್ಯರ್ಥಿಗಳನ್ನು ಆರಿಸುವ ಸಲುವಾಗಿ ಆಯ್ಕಿ ಮಾಡಲಾಗಿದ್ದ 100 ಮಂದಿ ಯುವಕರ ಪೈಕಿ 14 ಮಂದಿ ಯುವಕರನ್ನು ಕಣಕ್ಕಿಳಿಸಲಾಗಿದೆ. ಅದರಲ್ಲಿ ಕಾರ್ತಿ ಕೂಡ ಒಬ್ಬನಾಗಿದ್ದ ಎಂದು ಚಿದಂಬರಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


