ಅಭಿವೃದ್ಧಿ ಹಣ ಬಿಜೆಪಿ ಜೇಬಿಗೆ: ರಾಹುಲ್ ಗಾಂಧಿ

ರಾಯಚೂರು: ಕರ್ನಾಟಕ ರಾಜ್ಯದ ಅಭಿವೃದ್ಧಿ ಹಣವನ್ನು ಬಿಜೆಪಿ ನಾಯಕರು ತಮ್ಮ ತಮ್ಮ ಜೇಬಿಗಿಳಿಸಿದ್ದಾರೆ ಎಂದು ಸೋಮವಾರ ಕಾಂಗ್ರೆಸ್ ಉಪಾದಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಆಡಳಿತದಲ್ಲಿ ಕರ್ನಾಟಕದಲ್ಲಿ ಸಾಕಷ್ಟು ಭ್ರಷ್ಟಾಚಾರ ಹಗರಣಗಳು ಬೆಳಕಿಗೆ ಬಂದಿದ್ದು, ಅಭಿವೃದ್ಧಿ ಹಣವನ್ನು ಬಿಜೆಪಿ ನಾಯಕರು ತಮ್ಮ ಜೇಬಿಗಿಳಿಸಿದ್ದಾರೆ. ಸ್ವತಃ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿದಂತೆ ಹಲವು ಶಾಸಕ ಮತ್ತು ಸಚಿವರು ವಿವಿಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಅಂತೆಯೇ ಅಕ್ರಮ ಗಣಿಗಾರಿಕೆ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ನಾಯಕರು ಗಣಿಗಾರಿಕೆ ಹೆಸರಲ್ಲಿ ಹಣ ಲೂಟಿ ಮಾಡಿದ್ದಾರೆ. ಗಣಿ ಸಂಪತ್ತನ್ನು ಲೂಟಿ ಹೊಡೆದ ಆರೋಪದಲ್ಲಿ ಜನಾರ್ಧನ ರೆಡ್ಡಿ, ಸುರೇಶ್ ಬಾಬು ಮತ್ತು ಆನಂದ್ ಸಿಂಗ್ ಅವರು ಜೈಲಿಗೆ ಹೋಗಿದ್ದಾರೆ. ರಾಜ್ಯದ ಹೆಣ್ಣು ಮಕ್ಕಳಿಗೆ ಬಿಜೆಪಿ ಸರ್ಕಾರದಿಂದ ಯಾವುದೇ ಗೌರವ ಅಥವಾ ಭದ್ರತೆಗಳಿಲ್ಲ. ಬಿಜೆಪಿ ಸಚಿವನೊಬ್ಬ ಮಹಿಳೆ ಮೇಲೆ ಅತ್ಯಾಚಾರ ಮಾಡಿದರೆ, ಶಾಸಕರು ಸದನದಲ್ಲೇ ಅಶ್ಲೀಲ ಚಿತ್ರ ನೋಡಿ ಮಾಧ್ಯಮಗಳಲ್ಲಿ ಸಿಕ್ಕಿಬಿದಿದ್ದಾರೆ ಎಂದರು.
ಹೈದರಾಬಾದ್ ಕರ್ನಾಟಕ ಭಾಗಕ್ಕೆ ಬಿಜೆಪಿ ಸರ್ಕಾರ ನೀಡದ್ದನ್ನು ಕಾಂಗ್ರೆಸ್ ಸರ್ಕಾರ ನೀಡಿದ್ದು, ಹೈ-ಕ ಭಾಗಕ್ಕೆ ವಿಶೇಷ ಸ್ಥಾನ ಮಾನ ನೀಡುವ ಮೂಲಕ ಈ ಭಾಗದ ಅಭಿವೃದ್ಧಿಗೆ ಮುಂದಾಗಿದ್ದೇವೆ. ಈ ಹಿಂದೆ ಭಾರತ ಪ್ರಕಾಶಿಸುತ್ತಿದೆ ಎಂದವರ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಆದರೆ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಬರುತ್ತದೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.
ಹರಹರ ಮೋದಿ ಅಲ್ಲ, ನರಹರ ಮೋದಿ: ಸಿದ್ಧರಾಮಯ್ಯ
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಗೋದ್ರಾ ಹತ್ಯಾಕಾಂಡದ ಕುರಿತು ನರೇಂದ್ರ ಮೋದಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ ನರಮೇಧ ತಡೆಯಲು ಆಗಲಿಲ್ಲ. ಇಂತಹವರು ಪ್ರಧಾನಿಯಾದರೆ ದೇಶದಲ್ಲಿ ಅಶಾಂತಿ ಭುಗಿಲೇಳುತ್ತದೆ. ಬಿಜೆಪಿಗೆ ಮನುಷ್ಯತ್ವವೇ ಇಲ್ಲ. ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು ಕೋಮುವಾದಿ ಬಿಜೆಪಿ ಅಧಿಕಾರ ಹಿಡಿಯಲು ಯತ್ನಿಸುತ್ತಿದೆ. ಮೋದಿ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ದೇಶದ ಉದ್ಧಾರಕ್ಕೆ ಪ್ರಧಾನಿ ಮಾಡಿ ಎಂದು ಬೊಬ್ಬೆ ಇಡುತ್ತಿದ್ದಾರೆ ಎಂದರು.
ದೇಶಕ್ಕೆ ಗುಜರಾತ್ ಮಾದರಿ ಎಂದು ಮೋದಿ ಹೇಳುತ್ತಿದ್ದಾರೆ. ಆದರೆ ಅವರ ಗುಜರಾತ್‌ನಲ್ಲಿ ಬಡತನ, ಹಸಿವು ಮತ್ತು ನಿರುದ್ಯೋಗ ನಿರ್ಮೂಲನೆ ಆಗಲೇ ಇಲ್ಲ. ಕರ್ನಾಟಕಕ್ಕೆ ಗುಜರಾತ್ ಮಾದರಿಯ ಅಗತ್ಯವಿಲ್ಲ. ಕರ್ನಾಟಕಕ್ಕೆ ಕರ್ನಾಟಕವೇ ಮಾದರಿ ಎಂದು ಸಿದ್ಧರಾಮಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


