ಪಾಕ್ಗೆ ತಕ್ಕ ಪಾಠ ಎಂದು ಹೇಳಿದ್ದೆ: ಶಿವಸೇನಾ ನಾಯಕನ ಯೂಟರ್ನ್

ಮುಂಬೈ: ನರೇಂದ್ರ ಮೋದಿ ಪ್ರಧಾನಿಯಾದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದಷ್ಟೇ ಹೇಳಿದ್ದೆ ಎಂದು ಶಿವಸೇನಾ ಮುಖಂಡ ರಾಮದಾಸ್ ಕದಂ ಅವರು ಹೇಳಿದ್ದಾರೆ.
ನಿನ್ನೆ ಮುಂಬೈನಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಮದಾಸ್ ಕದಂ ಅವರು, ನರೇಂದ್ರ ಮೋದಿ ಪ್ರಧಾನಿಯಾದರೆ ಪಾಕಿಸ್ತಾನ 6 ತಿಂಗಳಲ್ಲಿ ಧ್ವಂಸವಾಗಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಮದಾಸ್ ಅವರ ಹೇಳಿಕೆಗೆ ಬಿಜೆಪಿ ಮುಖಂಡರು ಸೇರಿದಂತೆ ಹಲವು ರಾಜಕೀಯ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ರಾಮದಾಸ್ ಅವರ ನಡವಳಿಕೆಯನ್ನು ಟೀಕಿಸಿದ್ದರು. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಮದಾಸ್ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಾವು ಹಾಗೆ ಹೇಳಿಯೇ ಇಲ್ಲ. ಮೋದಿ ಪ್ರಧಾನಿಯಾದರೆ ಪಾಕಿಸ್ತಾನಕ್ಕೆ ಪಾಠ ಕಲಿಸಲಿದ್ದಾರೆ ಎಂದಷ್ಟೇ ಹೇಳಿದ್ದೆನು ಎಂದು ಹೇಳಿದರು.
ನಿನ್ನೆ ಮುಂಬೈನಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಶಿವಸೇನಾ ಮುಖ್ಯಸ್ಥ ಉಧ್ಧವ್ ಠಾಕ್ರೆ ಅವರೊಂದಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವೇದಿಕೆ ಹಂಚಿಕೊಂಡಿದ್ದ ಸಂದರ್ಭದಲ್ಲಿ ಮಾತನಾಡಿದ ಶಿವಸೇನೆ ಮುಖಂಡ ರಾಮದಾಸ್ ಕದಂ ಅವರು, ಮುಸ್ಲಿಂ ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿಕೊಂಡು ಭಾಷಣ ಮಾಡಿದ್ದರು. ಮುಂಬೈನ ಅಜಾದ್ ಮೈದಾನದಲ್ಲಿ ನಡೆದಿದ್ದ ಹಿಂಸಾಚಾರವನ್ನು ಉದಾಹರಣೆಯಾಗಿ ಕೊಟ್ಟ ಅವರು, 5 ಲಕ್ಷ ಅಲ್ಪ ಸಂಖ್ಯಾತರು ಸೇರಿದ್ದ ಸಮಾವೇಶದಲ್ಲಿ ಮಹಿಳಾ ಪೊಲೀಸರನ್ನು ಥಳಿಸಿ, ಲೈಂಗಿಕ ಕಿರುಕುಳ ನೀಡಲಾಗಿದೆ. ಮೋದಿ ಪ್ರಧಾನಿಯಾದರೆ ಇಂತಹವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಕೇವಲ ಆರು ತಿಂಗಳಲ್ಲಿ ಪಾಕಿಸ್ತಾನ ಧ್ವಂಸವಾಗಲಿದೆ ಎಂದು ರಾಮದಾಸ್ ಹೇಳಿದ್ದರು.
ಲೋಕಸಭಾ ಸಮರದ ಅಂತಿಮ ಹಂತದ ಕ್ಷಣಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಮತದಾರರ ಮನ ಸೆಳೆಯಲು, ರಾಜಕೀಯ ನಾಯಕರು ಮಾಡುತ್ತಿರುವ ಭಾಷಣಗಳು ಎಲ್ಲೆ ಮೀರುತ್ತಿವೆ. ಅಜಂಖಾನ್, ಗಿರಿರಾಜ್ ಸಿಂಗ್, ಅಮಿತ್ ಶಾ ಮತ್ತು ವಿಎಚ್ಪಿ ನಾಯಕ ಪ್ರವೀಣ್ ತೊಗಾಡಿಯಾ ಸೇರಿದಂತೆ ಹಲವು ನಾಯಕರು ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ. ಆದರೂ ಕೂಡ ರಾಜಕೀಯ ನಾಯಕರ ಮಾತಿನ ಲಹರಿ ಮಾತ್ರ ಬದಲಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


