ತನಿಖಾ ಸಮಿತಿಗೆ ಸುಪ್ರೀಂ ಅಸಮ್ಮತಿ: ಬಿಸಿಸಿಐಗೆ ಹಿನ್ನಡೆ

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಲುವಾಗಿ ಬಿಸಿಸಿಐ ಪ್ರಸ್ತಾಪಿಸಿದ್ದ ಮೂವರು ಸದಸ್ಯರ ತನಿಖಾ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ಅಸಮ್ಮತಿ ವ್ಯಕ್ತಪಡಿಸಿದೆ.
ಬಿಸಿಸಿಐನ ಸದಸ್ಯರನ್ನೇ ತನಿಖಾ ಸಮಿತಿಗೆ ಆಯ್ಕೆ ಮಾಡಿರುವುದನ್ನು ವಿರೋಧಿಸಿರುವ ಸುಪ್ರೀಂ ಕೋರ್ಟ್, ರವಿಶಾಸ್ತ್ರಿ, ನಿವೃತ್ತ ಸಿಬಿಐ ಮುಖ್ಯಸ್ಥ ಶಿವಲಾಲ್ ರಾಘವನ್ ಮತ್ತು ಕೋಲ್ಕತಾ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜೆಎನ್ ಪಟೇಲ್ ಅವರನ್ನೊಳಗೊಂಡ ಸಮಿತಿಯ ತನಿಖೆಗೆ ನ್ಯಾಯಾಲಯ ಅಸಮ್ಮತಿ ವ್ಯಕ್ತಪಡಿಸಿದೆ. ಅಲ್ಲದೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಮತ್ತು ಬೆಟ್ಟಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರ ನೇತೃತ್ವದ ತನಿಖಾ ಸಮಿತಿಯತ್ತ ನ್ಯಾಯಾಲಯ ಒಲವು ವ್ಯಕ್ತಪಡಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಲು ನಿಮಗೆ ಸಾಧ್ಯವೇ ಎಂದು ಕೇಳಿದೆ.
ಬಿಸಿಸಿಐ ಪ್ರಸ್ತಾಪಿಸಿದ್ದ ತನಿಖಾ ಸಮಿತಿಯಲ್ಲಿದ್ದ ಮೂವರು ಸದಸ್ಯರು ನೇರವಾಗಿ ಮತ್ತು ಪರೋಕ್ಷವಾಗಿ ಬಿಸಿಸಿಐನ ಸದಸ್ಯ ಮಂಡಳಿಯಲ್ಲಿದ್ದು, ಇದೇ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ಬಿಸಿಸಿಐ ತನಿಖಾ ಸಮಿತಿಗೆ ಅಸಮ್ಮತಿ ವ್ಯಕ್ತಪಡಿಸಿದೆ. ತನಿಖಾ ಸಮಿತಿಯಲ್ಲಿದ್ದ ರವಿಶಾಸ್ತ್ರಿ ಬಿಸಿಸಿಐನ ಆಡಳಿತ ಮಂಡಳಿಯಲ್ಲಿ ಇಲ್ಲದೇ ಹೋದರೂ ಕೂಡ ಸಂಸ್ಥೆಯಲ್ಲಿ ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ. ಅಂತೆಯೇ ನಿವೃತ್ತ ನ್ಯಾಯಮೂರ್ತಿ ಜೆಎನ್ ಪಟೇಲ್ ಅವರು, ಬಿಸಿಸಿಐ ಉಪಾಧ್ಯಕ್ಷ ಮತ್ತು ಮಧ್ಯಂತರ ಮುಖ್ಯಸ್ಥರಾಗಿದ್ದಾರೆ. ಶಿವಲಾಲ್ ರಾಘವನ್ ಅವರು ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧೀನದಲ್ಲಿರುವ ಕ್ರಿಕೆಟ್ ಕ್ಲಬ್ನ ಕಾರ್ಯದರ್ಶಿಯಾಗಿದ್ದಾರೆ. ಹೀಗಾಗಿಯೇ ಸುಪ್ರೀಂ ಕೋರ್ಟ ಈ ಮೂವರನ್ನೊಳಗೊಂಡ ತನಿಖಾ ಸಮಿತಿಗೆ ಅಸಮ್ಮತಿ ವ್ಯಕ್ತಪಡಿಸಿದೆ.
ಈ ಹಿಂದೆ 2013ರ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್ ಅವರು ಸತತ ನಾಲ್ಕು ತಿಂಗಳ ಕಾಲ ತನಿಖೆ ನಡೆಸಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತು ಅವರ ಅಳಿಯ ಗುರುನಾಥನ್ ಮೇಯಪ್ಪನ್ರನ್ನೊಳಗೊಂಡ 11 ಮಂದಿ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಸುಪ್ರೀಂಕೋರ್ಟ್ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ಸಮಿತಿ ರಚನೆಗೆ ಸದಸ್ಯರನ್ನು ಸೂಚಿಸುವಂತೆ ಬಿಸಿಸಿಐಗೆ ಹೇಳಿತ್ತು. ಅದರಂತೆ ಬಿಸಿಸಿಐ ರವಿಶಾಸ್ತ್ರಿ, ಶಿವಲಾಲ್ ರಾಘವನ್ ಮತ್ತು ಜೆಎನ್ ಪಟೇಲ್ರ ಹೆಸರನ್ನು ಶಿಫಾರಸ್ಸು ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


