ಈಗಿನ ಸುದ್ದಿ

'ವಾದ್ರಾ' ಕಾಂಗ್ರೆಸ್ ಭ್ರಷ್ಟಾಚಾರದ ಭಾಗ: ಅಮಿತ್ ಶಾ

'ವಾದ್ರಾ' ಕಾಂಗ್ರೆಸ್ ಭ್ರಷ್ಟಾಚಾರದ ಭಾಗ: ಅಮಿತ್ ಶಾ
Published On :

ಲಖನೌ: ರಾಬರ್ಟ್ ವಾದ್ರಾ ಪ್ರಕರಣ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಭಾಗವಷ್ಟೇ ಎಂದು ಗುಜರಾತ್ ಮಾಜಿ ಸಚಿವ ಮತ್ತು ನರೇಂದ್ರ ಮೋದಿ ಅವರ ಆಪ್ತ ಅಮಿತ್ ಶಾ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಅಮಿತ್ ಶಾ ಅವರು, ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದಾರೆ. 'ರಾಬರ್ಟ್ ವಾದ್ರಾ ಪ್ರಕರಣವನ್ನು ಬಿಜೆಪಿಯಾಗಲಿ ಅಥವಾ ನಾನಾಗಲಿ ವೈಯುಕ್ತಿಕವಾಗಿ ತೆಗೆದುಕೊಂಡಿಲ್ಲ. ವಾದ್ರಾ ಪ್ರಕರಣ ಕಾಂಗ್ರೆಸ್ ಭ್ರಷ್ಟಾಚಾರದ ಭಾಗವಷ್ಟೇ. ಇಂತಹ ಹಲವು ಭ್ರಷ್ಟಾಚಾರ ಪ್ರಕರಣಗಳು ಕಾಂಗ್ರೆಸ್ ಖಾತೆಯಲ್ಲಿವೆ'.

'ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಸಚಿವ ಸಂಪುಟದ ಮುಂದೆ ವಾದ್ರಾ ಪ್ರಕರಣ ಬಂದರೆ ಖಂಡಿತವಾಗಿಯೂ ನಾವು ಎಲ್ಲ ಪ್ರಕರಣಗಳನ್ನು ವಿಚಾರಣೆಗೊಪ್ಪಿಸುವಂತೆಯೇ ವಾದ್ರಾ ಪ್ರಕರಣವನ್ನು ವಿಚಾರಣೆಗೊಳಪಡಿಸುತ್ತೇವೆ. ವಾದ್ರಾ ಪ್ರಕರಣವನ್ನು ನಾವೇನು ವಿಶೇಷವಾಗಿ ಕಾಣುವುದಿಲ್ಲ. ವಾದ್ರಾ ಪ್ರಕರಣದ ಕುರಿತು ಉಮಾಭಾರತಿ ಹೇಳಿರುವ ಮಾತುಗಳು ಅವರ ವೈಯುಕ್ತಿ ಅಭಿಪ್ರಾಯಗಳಾಗಿವೆ' ಎಂದು ಅಮಿತ್ ಶಾ ಹೇಳಿದರು.

ಇದೇ ವೇಳೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 275ಕ್ಕೂ ಅಧಿಕ ಸ್ಥಾನಗಳಿಸಲಿದ್ದು, ಕೇಂದ್ರದಲ್ಲಿ ಸರ್ಕಾರ ರಚಿಸಲಿದೆ. ಅಗತ್ಯ ಬಿದ್ದರೆ ಮೈತ್ರಿ ಪಕ್ಷಗಳ ಸಹಾಯ ಪಡೆಯುತ್ತೇವೆ ಎಂದು ಶಾ ಹೇಳಿದರು.

ಪಾಕಿಸ್ತಾನ ವಿರುದ್ಧದ ಹೇಳಿಕೆಯನ್ನು ತಳ್ಳಿಹಾಕಿದ ಶಾ
ಇದೇ ವೇಳೆ ಪಾಕಿಸ್ತಾನ ಕರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಅಮಿತ್ ಶಾ, ತಾವು ಆ ರೀತಿ ಹೇಳಿಯೇ ಇಲ್ಲ ಎಂದರು. ಪಾಕಿಸ್ತಾನ ಕುರಿತು ನಿಮ್ಮ ನಿಲುವು ಏನು ಎಂದು ಕೇಳಿದಾಗ, 'ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು, ಮುಂದಿನ ವಿದೇಶಾಂಗ ಸಚಿವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಪಾಕಿಸ್ತಾನ ಕುರಿತು ನಾವು ಯಾವುದೇ ವೈಯುಕ್ತಿಕ ನಿಲುವನ್ನು ಹೊಂದಿಲ್ಲ' ಎಂದು ಹೇಳಿದರು.

ಗೂಢಚಾರ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ
ಮಹಿಳೆಯ ವಿರುದ್ಧ ಗೂಢಚಾರಿಕೆ ನಡೆಸಿದ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಗೂಢಚಾರಿಕೆ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಪ್ರಕರಣದ ಬಗ್ಗೆ ತಾವು ಯಾವುದೇ ರೀತಿಯ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಹೇಳಿದರು.

ಅಂತೆಯೇ ಬಿಜೆಪಿ ಮುಖಂಡ ಮುರಳಿ ಮನೋಹರ್ ಜೋಷಿ ಅವರ "ಮೋದಿ ಅಲೆ ಅಲ್ಲ ಬಿಜೆಪಿ ಅಲೆ" ಹೇಳಿಕೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿದ ಅಮಿತ್ ಶಾ, ಯುಪಿಎ ಭ್ರಷ್ಟಾಚಾರ ಮತ್ತು ಬಿಜೆಪಿ ಪ್ರಮಾಣಿಕತೆಯನ್ನು ಗಮನಿಸಿ ದೇಶದ ಜನತೆ ತುಲನೆ ಮಾಡಿ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದರು.

ಪಕ್ಷದ ನಿರ್ಧಾರಕ್ಕೆ ಬದ್ಧ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ನಿಮ್ಮ ಪಾತ್ರವೇನು ಎಂದು ಕೇಳಿದ ಪ್ರಶ್ನೆ ಉತ್ತರಿಸಿದ ಅಮಿತ್ ಶಾ, ನಾನಾಗಿ ಯಾವ ಹೊಣೆಗಾರಿಕೆಯನ್ನು ಕೇಳುವುದಿಲ್ಲ. ನಾನು ಜನರ ಮಧ್ಯೆ ಇರಲು ಬಯಸುತ್ತೇನೆ. ಅಂತೆಯೇ ನನ್ನ ಮೇಲೆ ಭರವಸೆ ಇಟ್ಟು ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಶಾ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.