ಈಗಿನ ಸುದ್ದಿ

ವಿಜಯಶಾಂತಿ, ಕೆಸಿಆರ್ ಮೇಲೆ ಸಿಬಿಐ ತೂಗುಗತ್ತಿ

ವಿಜಯಶಾಂತಿ, ಕೆಸಿಆರ್ ಮೇಲೆ ಸಿಬಿಐ ತೂಗುಗತ್ತಿ
Published On :

ಹೈದರಾಬಾದ್: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖ್ಯಸ್ಥರಾದ ಕೆ.ಚಂದ್ರಶೇಖರ ರಾವ್ ಮತ್ತು ನಟಿ ವಿಜಯಶಾಂತಿ ಅವರ ವಿರುದ್ಧ ತನಿಖೆ ನಡೆಸುವಂತೆ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಹೋರಾಟದ ಹೆಸರಲ್ಲಿ ಟಿ.ಆರ್.ಎಸ್ (ತೆಲಂಗಾಣ ರಾಷ್ಟ್ರೀಯ ಸಮಿತಿ)ಪಕ್ಷದ ನಾಯಕರು ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಇಂದು ಸಿಬಿಐ ವಿಶೇಷ ನ್ಯಾಯಾಲಯ ಟಿ.ಆರ್.ಎಸ್. ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್, ನಟಿ ಮತ್ತು ಪಕ್ಷದ ಮುಖಂಡೆ ವಿಜಯಶಾಂತಿ ಮತ್ತು ಮುಖಂಡ ಟಿ.ಹರೀಶ್ ರಾವ್ ಅವರ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿದೆ.

ಈ ನಡುವೆ ನ್ಯಾಯಾಲಯದ ಆದೇಶ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ವಿರುದ್ಧ ಕೆ.ಚಂದ್ರಶೇಖರ ರಾವ್ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಬಿಐ ತನಿಖೆ ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದ್ದು, ಇದಕ್ಕೆ ತಾವು ಹೆದರುವುದಿಲ್ಲ. ಹಲವು ದಶಕಗಳಿಂದ ತಾವು ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಗೊಡ್ಡುಬೆದರಿಕೆಗೆ ನಾನು ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಂತೆಯೇ ಪಕ್ಷದ ಮತ್ತೋರ್ವ ಮುಖಂಡೆ ನಟಿ ವಿಜಯಶಾಂತಿ ಅವರು ಮಾತನಾಡಿ, ಸಿಬಿಐ ತನಿಖೆಯನ್ನು ತಾವು ಸ್ವಾಗತಿಸುವುದಾಗಿ ಮತ್ತು ತನಿಖೆಯ ಬಳಿಕ ಸತ್ಯಾಸತ್ಯತೆ ಜನತೆಗೆ ತಿಳಿಯಲಿದೆ ಎಂದು ಹೇಳಿದರು.

ದಶಕಗಳಷ್ಟು ಹಳೆಯದಾದ ತೆಲಂಗಾಣ ರಾಜ್ಯ ರಚನೆ ಹೋರಾಟಕ್ಕೆ ಈಗ ತಾರ್ಕಿಕ ಅಂತ್ಯ ಬಿದ್ದಿದೆಯಾದರೂ, ಹೋರಾಟದ ಸಂದರ್ಭದಲ್ಲಿ ಹೋರಾಟಗಾರರು ಹೈದರಾಬಾದಿನಲ್ಲಿರುವ ಸೀಮಾಂಧ್ರದ ಉದ್ಯಮಿಗಳು, ವ್ಯಾಪಾರಿಗಳು ಮತ್ತು ನೌಕರರನ್ನು ಪೀಡಿಸಿ ಆಸ್ತಿ ಮತ್ತು ಹಣವನ್ನು ಲೂಟಿ ಮಾಡಿದ್ದರು. ಇದಕ್ಕೆ ಟಿಆರ್ ಎಸ್ ಪಕ್ಷದ ಮುಖಂಡ ಕೆ.ಚಂದ್ರಶೇಖರ ರಾವ್ ಅವರು ಕುಮ್ಮಕ್ಕು ನೀಡಿದ್ದರು ಎಂದು ಕೆಲ ಉದ್ಯಮಿಗಳು ಮತ್ತು ವ್ಯಾಪರಸ್ಥರು ಈ ಹಿಂದೆ ಆರೋಪಿಸಿದ್ದರು. ಕೆಲ ಕಾರ್ಮಿಕ ಸಂಘಟನೆಗಳು ಈ ವಿಚಾರವನ್ನು ನ್ಯಾಯಾಲಯದಲ್ಲಿಯೂ ಪ್ರಶ್ನಿಸಿದ್ದವು.

ಹಲವು ವರ್ಷಗಳ ಹಿಂದಿನ ಈ ದೂರಿಗೆ ಇದೀಗ ಜೀವ ಬಂದಿದ್ದು, ಸಿಬಿಐ ನ್ಯಾಯಾಲಯ ಇದೀಗ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದೆ. ಆದರೆ ಇದೀಗ ತಾನೆ ಟಿಆರ್ ಎಸ್ ಪಕ್ಷ ಕಾಂಗ್ರೆಸ್ ಸಖ್ಯ ತೊರೆದಿದ್ದು, ಅದಾಗಲೇ ಸಿಬಿಐ ತೂಗುಗತ್ತಿ ಟಿಆರ್ ಎಸ್ ನಾಯಕರ ತಲೆ ಮೇಲೆ ತೂಗುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಕೂಡ ಕಾಂಗ್ರೆಸ್ ಪಕ್ಷದಲ್ಲಿದ್ದ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವರ ನಿಧನದ ನಂತರ ಕಾಂಗ್ರೆಸ್ ತೊರೆದು ವೈಎಸ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ್ದರು. ಆಗ ಕೂಡ ಅವರು ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುವಂತಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.