ದೆಹಲಿಯ ಮಹಿಳೆಯೊಬ್ಬಳ ತಪ್ಪೊಪ್ಪಿಗೆ..

ದೆಹಲಿಯ ಮಹಿಳೆಯೊಬ್ಬಳು ಪ್ರಸಿದ್ಧ ಇಂಗ್ಲಿಷ್ ಮ್ಯಾಗಜೀನ್ನಲ್ಲಿ ಬರೆದ ಲೇಖನದ ಆಯ್ದ ಭಾಗವಿದು.
'ನಂಗೆ ಹೀಗೆ ಮಾಡೋದಕ್ಕೆ ನಿಂಗೆ ಮನಸ್ಸಾದರೂ ಹೇಗೆ ಬಂತು? ನಾನೇನು ತಪ್ಪು ಮಾಡಿದೆ? ನಿನ್ನನ್ನು ಯಾಕಾದ್ರೂ ಮದುವೆಯಾದ್ನೋ ಅಂತ ಹಣೆಹಣೆ ಚಚ್ಚಿಕೊಳ್ಳುವಂತಾಗಿದೆ' ಎಂದು ನನ್ನ ಗಂಡ ಕಣ್ಣೀರು ಹಾಕುತ್ತ ಕೂಗಾಡುತ್ತಿದ್ದ. ಆವತ್ತಷ್ಟೇ ಅವನಿಗೆ ನನ್ನ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿತ್ತು. ಏನು ಹೇಳುವುದೆಂದುತಿಳಿಯದೆ ನಾನು ಕಂಗಾಲಾಗಿದ್ದೆ. ನಾನು ಮಾಡಿದ್ದು ಸರಿ ಎಂದು ಹೇಗೆ ಹೇಳಲಿ? ನನ್ನ ಮುಖ ಕೆಂಪಗಾಗಿತ್ತು. ಮೈ ನಡುಗುತ್ತಿತ್ತು. ಅಪರಾಧಿ ಭಾವದಲ್ಲಿ ತಲೆ ತಗ್ಗಿಸಿ ನಿಂತಿದ್ದೆ. ಗಂಡ ಕೂಗಾಡುತ್ತಲೇ ಇದ್ದ.
ಆ ಸಮಯದಲ್ಲಿ ಅವನಿಗೆ ಏನು ಹೇಳಿದರೂ ಸಮಾಧಾನವಾಗುವಂತಿರಲಿಲ್ಲ. ನನಗೆ ಹೇಗೆ ಸಮಾಧಾನ ಮಾಡಿಕೊಳ್ಳಲಿ ಎಂಬುದೇ ನನಗೆ ಹೊಳೆಯುತ್ತಿರಲಿಲ್ಲ. ಅಷ್ಟೂ ವರ್ಷ ಅವನು ನನಗೆ ತೋರಿದ ಪ್ರೀತಿ, ನಾನು ಅವನಿಗೆ ಕೊಟ್ಟ ಪ್ರೀತಿ ಆ ಒಂದು ಕ್ಷಣದಲ್ಲಿ ಕೊಚ್ಚಿಕೊಂಡು ಹೋಗಿತ್ತು. ನಾನೊಬ್ಬಳು ರಾಕ್ಷಸಿಯಾಗಿ ಅವನ ಕಣ್ಮುಂದೆ ನಿಂತಿದ್ದೆ. ನಿಜ, ನಾನು ತಪ್ಪು ಮಾಡಿದ್ದೆ.
ಈಗ ಅವನ ಜೊತೆ ನಾನಿಲ್ಲ. ಡೈವೊರ್ಸ್ ಆಗಿದೆ. ಆದರೆ, ಇಷ್ಟು ವರ್ಷ ಕಳೆದ ಮೇಲೂ ನನ್ನನ್ನು ಅದೊಂದು ಪ್ರಶ್ನೆ ಕಾಡುತ್ತಲೇ ಇರುತ್ತದೆ- 'ನಾನೇಕೆ ಅವನಿಗೆ ಮೋಸ ಮಾಡಿದೆ? ಅವನು ಒಳ್ಳೆಯವನೇ ಆಗಿದ್ದ, ನನ್ನನ್ನು ತುಂಬಾ ಪ್ರೀತಿಸುತ್ತಿದ್ದ, ಬಹಳ ಸೌಮ್ಯ ಸ್ವಭಾವದವನೂ ಆಗಿದ್ದ. ಆದರೂ ನಾನೇಕೆ ಇನ್ನೊಬ್ಬನ ಸಹವಾಸದಲ್ಲಿ ಬಿದ್ದೆ?' ಬಹುಶಃ ನನ್ನ ತಪ್ಪನ್ನು ನನಗಿಂತ ಕಠೋರವಾಗಿ ವಿಮರ್ಶಿಸಿದವರು ಯಾರೂ ಇಲ್ಲ. ಕೋರ್ಟ್ ಕೂಡ ಡೈವೊರ್ಸ್ ಮಂಜೂರು ಮಾಡಿ ಕೈತೊಳೆದುಕೊಂಡಿತು. ನನ್ನ ಗಂಡ ನನಗೊಂದಿಷ್ಟು ಬೈದು, ಕೂಗಾಡಿ ನೆಮ್ಮದಿ ಕಂಡುಕೊಂಡ. ಆದರೆ, ಒಬ್ಬಳು ಮಹಿಳೆ ಏಕೆ ತನ್ನ ಗಂಡನಿಗೆ ಮೋಸ ಮಾಡುತ್ತಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾನು ಬಹಳ ಪ್ರಯತ್ನಪಟ್ಟೆ. ಕೊನೆಗೂ ನನಗೆ ನನ್ನ ಬಗ್ಗೆ ಸಮಾಧಾನವಾಗಿಲ್ಲ. ನನಗೆ ಅತ್ಯಂತ ಕಠಿಣ ಶಿಕ್ಷೆ ಕೊಟ್ಟುಕೊಂಡವಳು ನಾನೇ.
ಇತ್ತೀಚೆಗೆ ಒಂದು ಅಧ್ಯಯನದ ವರದಿ ಓದುತ್ತಿದ್ದೆ. ಅದರ ಪ್ರಕಾರ, ಮಹಿಳೆಯರು ಗಂಡನಿಗೆ ಮೋಸ ಮಾಡುವುದಕ್ಕೆ ಭಾವನಾತ್ಮಕ ತೃಪ್ತಿ, ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಅವಕಾಶ ಹಾಗೂ ಪ್ರೀತಿಯೇ ಕಾರಣವಂತೆ. ಮದುವೆಯಲ್ಲಿ ಸಿಗದ ತೃಪ್ತಿಯನ್ನು ಆಕೆ ಹೊರಗಿನ ಸಂಬಂಧದಲ್ಲಿ ಹುಡುಕುತ್ತಾಳೆ. ಅಲ್ಲಿ ಅದು ಸಿಗುತ್ತದೆಯೋ ಇಲ್ಲವೋ ಬೇರೆ ಮಾತು. ಆದರೆ, ಅಷ್ಟರಲ್ಲಿ ತಪ್ಪು ಆಗಿಹೋಗಿರುತ್ತದೆ.
ಅನೇಕ ವರ್ಷಗಳ ಕಾಲ ಆತ್ಮವಿಮರ್ಶೆ ಮಾಡಿಕೊಂಡ ಮೇಲೆ ನಾನೇಕೆ ನನ್ನಗಂಡನಿಗೆ ಮೋಸ ಮಾಡಿದೆ ಎಂಬುದಕ್ಕೆ ಕಾರಣಗಳನ್ನು ಪತ್ತೆಹಚ್ಚಿದೆ.
ನನ್ನ ಮನಸ್ಥಿತಿ
ನಾನೊಂದು ಭ್ರಮೆಯಲ್ಲಿ ಬದುಕುತ್ತಿದ್ದೆ. ಮದುವೆಯಲ್ಲಿ ಸಿಗದ ಸಂತೋಷವನ್ನು ಹೊರಗೆ ಹುಡುಕಿಕೊಳ್ಳಬಹುದು ಎಂಬ ಭ್ರಮೆಯದು. ಆ ಭ್ರಮೆಯಲ್ಲೇ ಪ್ರೇಮದ ಫ್ಯಾಂಟಸಿ ಲೋಕವೊಂದಕ್ಕೆ ಜಾರಿದೆ. ಅಲ್ಲಿ ನನಗೆ ಮದುವೆಯ ಹೊರಗಿನದೆಲ್ಲವೂ ಬಹಳ ಸುಂದರವಾಗಿ ಕಾಣಿಸುತ್ತಿದ್ದವು. ನನ್ನ ಗಂಡನನ್ನು ಬಿಟ್ಟು ಇನ್ನೆಲ್ಲಾ ಗಂಡಸರೂ ಆಕರ್ಷಕವಾಗಿ ಕಾಣಿಸುತ್ತಿದ್ದರು. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಇದೂ ಕೂಡ. ನನ್ನ ಗಂಡನ ಕೈಲಾಗದ್ದು ಇನ್ನೊಬ್ಬನಿಂದ ಸಾಧ್ಯವಾಗಬಹುದಲ್ಲವೇ? ಹೀಗೆ ಯೋಚಿಸಿದ್ದು ನನ್ನದೇ ತಪ್ಪು. ಇವತ್ತಿನವರೆಗೂ ನನಗೆ ಯಾರಿಂದಲೂ ಸಂಪೂರ್ಣ ಸಂತೋಷ ಎಂಬುದು ಸಿಕ್ಕಿಲ್ಲ. ಎಲ್ಲಾ ಸಂಬಂಧಗಳಲ್ಲೂ ಒಂದಲ್ಲಾ ಒಂದು ಕೊರತೆ ಕಾಣಿಸಿದೆ. ಈ ಸುಖಕ್ಕಾಗಿ ಗಂಡನ ಜೊತೆ ಜಗಳ ಮಾಡಿಕೊಂಡು, ಅವನ ಮನಸ್ಸು ನೋಯಿಸಿ ಮದುವೆಯಿಂದ ಹೊರಬರಬೇಕಿತ್ತೇ ಎಂದು ಈಗ ಅನ್ನಿಸುತ್ತಿದೆ. ಅದರಿಂದ ಇನ್ನಷ್ಟು ಗೊಂದಲ ಹಾಗೂ ದುಃಖಕ್ಕೆ ಸಿಲುಕಿದ್ದೇನೆಯೇ ಹೊರತು ಸಂತೋಷವನ್ನಂತೂ ಕಂಡಿಲ್ಲ.
ಗಂಡನಿಗೆ ಮೋಸ ಮಾಡಿದ ಹೆಂಡತಿಯರ ಸಾಲಿನಲ್ಲಿ ನಿಂತ ನನಗೆ ಈಗ ಗೊತ್ತಾಗಿರುವ ಸತ್ಯವೇನೆಂದರೆ, ನನ್ನಿಂದ ನಾನು ದೂರ ಓಡಿಹೋಗಲು ಪ್ರಯತ್ನಿಸಿದ್ದು ಅಥವಾ ನನ್ನ ಸಂತೋಷ- ಬೇಸರಕ್ಕೆ ನಾನೇ ಕಾರಣ ಎಂಬ ಸತ್ಯವನ್ನು ಅರ್ಥಮಾಡಿಕೊಳ್ಳದೆ ಇದ್ದುದು ನಾನು ಮಾಡಿದ ದೊಡ್ಡ ತಪ್ಪು. ನನ್ನ ಸಂತೋಷ ಇನ್ಯಾರದ್ದೋ ಜವಾಬ್ದಾರಿಯಾಗಿರಲಿಲ್ಲ. ಅದನ್ನು ನಾನೇ ಹುಡುಕಿಕೊಳ್ಳಬೇಕಾಗಿತ್ತು. ನನ್ನ ಜೊತೆ ಸಂಬಂಧವಿರಿಸಿಕೊಂಡ ಗಂಡಸೂ ನನಗೆ ಸಂತೋಷ ನೀಡಲಿಲ್ಲ. ಗಂಡ ಮಾತ್ರ ನನಗೆ ಸಂಪೂರ್ಣ ಸಂತೋಷ ನೀಡಬೇಕೆಂದು ಬಯಸಿದ್ದು ನನ್ನ ಸ್ವಾರ್ಥವಲ್ಲವೇ? ಇಷ್ಟಕ್ಕೂ ನಾನುಅವನಿಗೆ ಪೂರ್ಣಪ್ರಮಾಣದ ಸಂತೋಷ ನೀಡಿದ್ದೆನಾ? ಆದರೂ ಅವನು ನಮ್ಮಮದುವೆಯನ್ನು ಗೌರವಿಸುತ್ತಿರಲಿಲ್ಲವಾ?
ನನ್ನನ್ನು ಕಾಡುತ್ತಿದ್ದ ಗಿಲ್ಟ್
ನಿಜ ಹೇಳಬೇಕೆಂದರೆ ಗಂಡನಲ್ಲಿ ನನಗೆ ಆಕರ್ಷಣೆ ಹೊರಟುಹೋಗಿತ್ತು. ಅವನೊಂದಿಗೆ ಮಲಗಿದಾಗ ನಾನು ಇನ್ಯಾರನ್ನೋ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತಿದ್ದೆ. ಲೈಂಗಿಕವಾಗಿ ಅವನು ನನ್ನನ್ನು ಆಕರ್ಷಿಸುತ್ತಲೇ ಇರಲಿಲ್ಲ. ಆದರೆ, ಇದನ್ನೆಲ್ಲ ಅವನಿಗೆ ಹೇಳಿದರೆ ನೊಂದುಕೊಳ್ಳುತ್ತಾನೆ ಎಂದು ಹೇಳಿರಲಿಲ್ಲ. ನಾನೊಬ್ಬಳು ಕೆಟ್ಟ ಹೆಂಗಸು ಎಂದು ನನ್ನಷ್ಟಕ್ಕೆ ನಾನೇ ತೀರ್ಮಾನ ಮಾಡಿಕೊಂಡಿದ್ದೆ. ಇದು ಗಂಡನಿಗೆ ಗೊತ್ತಾದರೆ ಏನು ಮಾಡುವುದು ಎಂದು ಹೆದರಿಯೂ ಇದ್ದೆ. ನನಗೇನನ್ನಿಸುತ್ತದೆಯೋ ಅದನ್ನು ಗಂಡನ ಜೊತೆ ಹಂಚಿಕೊಂಡು ಅಥವಾ ನನ್ನೊಳಗೇ ಅವುಗಳನ್ನು ಶಮನ ಮಾಡಿಕೊಂಡು ಸರಿದಾರಿಗೆ ಬರುವುದರ ಬದಲು ನಾನು ನಿಜಕ್ಕೂ ಕೆಟ್ಟ ಹೆಂಗಸೇ ಆಗಿಬಿಟ್ಟೆ. ಗಂಡನಿಂದ ಪ್ರೀತಿಸಿಕೊಳ್ಳಲು ನಾನು ಯೋಗ್ಯಳಲ್ಲ ಎಂಬ ಭಾವನೆ ಕ್ರಮೇಣ ನನ್ನನ್ನು ಆವರಿಸಿಕೊಂಡಿತು. ಅದಕ್ಕೆ ಅವಕಾಶ ಕೊಟ್ಟಿದ್ದೇ ನಾನು ಮಾಡಿದ ತಪ್ಪು. ನಾವು ನಮ್ಮನ್ನು ಹೇಗೆ ನೋಡಿಕೊಳ್ಳುತ್ತೇವೋ ಅದೇ ನಮ್ಮನ್ನು ಕೆಲ ಹುಚ್ಚು ಸಾಹಸಗಳಿಗೆ ಕೈಹಾಕುವಂತೆ ಪ್ರೇರೇಪಿಸುತ್ತದೆ. ನಾನು ಅವನಿಗೆ ಮೋಸ ಮಾಡುತ್ತಿದ್ದೇನೆ ಎಂಬ ಭಾವನೆಯೇ ನಿಜಕ್ಕೂ ನನ್ನನ್ನು ಅಕ್ರಮ ಸಂಬಂಧಕ್ಕೆ ತಳ್ಳಿತು.
ಪ್ರಬುದ್ಧತೆಯ ಕೊರತೆ
ಹೆಂಗಸರಿಗೆ ಎಷ್ಟು ವಯಸ್ಸಾದರೂ ಪ್ರಬುದ್ಧತೆ ಬರುವುದಿಲ್ಲ, ಅವರು ಚೆಲ್ಲುಚೆಲ್ಲಾಗಿ ಆಡುತ್ತಾರೆಂಬ ಆರೋಪವನ್ನು ನಾನು ನಿಜ ಮಾಡಿಬಿಟ್ಟೆ. ನನ್ನ ಹಾಗೂ ಗಂಡನ ನಡುವೆ ಇದ್ದ ಹೊಂದಾಣಿಕೆಯ ಕೊರತೆಯನ್ನು ಅಥವಾ ತಪ್ಪು ಕಲ್ಪನೆಗಳನ್ನು ಹೇಗೆ ಸರಿಪಡಿಸಿಕೊಳ್ಳುವುದು ಎಂಬುದು ನನಗೆ ಹೊಳೆಯಲೇ ಇಲ್ಲ. ಅವುಗಳನ್ನು ಹ್ಯಾಂಡಲ್ ಮಾಡುವಷ್ಟು ಬುದ್ಧಿವಂತಿಕೆ ನನ್ನಲ್ಲಿರಲಿಲ್ಲ. ಯಾವಾಗಲೂ ನಾವು ಜಗಳ ಆಡುತ್ತಿದ್ದೆವು, ಆಗ ಸಿಟ್ಟು ಬರುತ್ತಿತ್ತು, ಅದರ ಪರಿಣಾಮವಾಗಿ ಮಾತು ಬಂದ್ ಆಗುತ್ತಿತ್ತು. ಅದರಿಂದ ಪ್ರೀತಿಯೂ ಕಡಿಮೆಯಾಗುತ್ತಿತ್ತು. ಇವುಗಳನ್ನೆಲ್ಲ ಡೈನಾಮಿಕ್ ಆಗಿ ಪರಿಹರಿಸಿಕೊಳ್ಳುವುದು ಹೇಗೆಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಇದರಲ್ಲಿ ನನ್ನ ಗಂಡನ ತಪ್ಪೂ ಇರಬಹುದು. ಆದರೆ, ಅವನು ಬಹಳ ಸಲ ನನ್ನನ್ನು ಸಮಾಧಾನ ಮಾಡಲು ಬರುತ್ತಿದ್ದ. ನಾನೇ ಸಿಟ್ಟಿನಿಂದ ದೂರ ತಳ್ಳುತ್ತಿದ್ದೆ. ಪ್ರತಿ ಸಲ ನಮ್ಮಿಬ್ಬರ ನಡುವೆ ಜಗಳವಾದಾಗಲೂ ಅವನಿಗೆ ನನ್ನ ಮೇಲೆ ಪ್ರೀತಿಯಿಲ್ಲ ಎಂದೇ ದೃಢವಾಗಿ ನಂಬುತ್ತಿದ್ದೆ. ಹಾಗಾಗಿ ನನಗೆ ಬೇಕಾದ ಪ್ರೀತಿಯನ್ನು ಬೇರೆಡೆ ಹುಡುಕಿಕೊಳ್ಳಬೇಕು ಎಂದು ಹೊರಟೆ. ಎಷ್ಟೇ ಮನಸ್ತಾಪ ಬಂದರೂ ಗಂಡನ ಜೊತೆಗೆ ಮಾತು ನಿಲ್ಲಿಸಬಾರದು ಎಂಬುದು ನನಗೆ ಈಗ ಹೊಳೆಯುತ್ತಿದೆ. ಇಬ್ಬರ ನಡುವೆ ಸಂವಹನ ಮಾರ್ಗ ಯಾವತ್ತೂ ತೆರೆದುಕೊಂಡಿರಬೇಕು. ಆಗ ಏನೇ ಸಮಸ್ಯೆ ಬಂದರೂ ಅದನ್ನು ಬಗೆಹರಿಸಿಕೊಳ್ಳಬಹುದು. ಮಾತೇ ಆಡದಿದ್ದರೆ ಅಪನಂಬಿಕೆ ಹೆಚ್ಚುತ್ತ ಹೋಗುತ್ತದೆ. ಗಂಡನಿಗೆ ಮೋಸ ಮಾಡುವ ಬಹಳ ಹೆಂಡತಿಯರಲ್ಲಿ ನಾನು ಇದೇ ಸಮಸ್ಯೆಯನ್ನು ಕೇಳಿದ್ದೇನೆ. ಅವರು ಪದೇ ಪದೇ ಗಂಡನ ಜೊತೆ ಮಾತು ಬಿಡುತ್ತಾರೆ.
ಪ್ಯಾಷನ್ ಸತ್ತುಹೋಗಿತ್ತು
ಗಂಡನ ಜೊತೆ ಚೆನ್ನಾಗಿರಬೇಕು, ಅವನನ್ನು ಪ್ರೀತಿಸಬೇಕು ಎಂಬ ಪ್ಯಾಷನ್ ನನ್ನಲ್ಲಿ ಸತ್ತುಹೋಗಿತ್ತು. ಮದುವೆಯಲ್ಲಿ ನನ್ನ ಜವಾಬ್ದಾರಿಯನ್ನೇ ನಾನು ಮರೆತಿದ್ದೆ. ಯಾವಾಗಲೂ ಅವನೇ ನನ್ನನ್ನು ಓಲೈಸುತ್ತ ಬರಲಿ, ನನಗಾಗಿ ಅವನು ಹಂಬಲಿಸುತ್ತಲೇ ಇರಲಿ ಎಂದೆಲ್ಲ ಹುಚ್ಚುಚ್ಚಾಗಿ ಯೋಚಿಸುತ್ತಿದ್ದೆ. ಇದೆಲ್ಲ ಲವ್ಮಾಡುವಾಗ ನಡೆಯುತ್ತದೆ. ಮದುವೆಯಾದ ಮೂರ್ನಾಲ್ಕು ವರ್ಷದ ಮೇಲೂ ಹೀಗಿರಬೇಕೆಂದರೆ ಅದೇನು ಮಕ್ಕಳಾಟವೇ? ಆದರೆ ನಾನಿದನ್ನು ಆಗ ಅರ್ಥ ಮಾಡಿಕೊಳ್ಳಲಿಲ್ಲ. ಪ್ರತಿದಿನವೂ ನಮ್ಮ ನಡುವೆ ಎಕ್ಸೈಟ್ಮೆಂಟ್ ಇರಬೇಕು ಎಂದು ಆಸೆಪಡುತ್ತಿದ್ದೆ. ಒಂದು ದಿನ ಇನ್ನೊಂದು ದಿನದಂತೆ ಇದ್ದರೆ ನನಗೆ ಸಿಟ್ಟು ಬರುತ್ತಿತ್ತು. ಅದರಿಂದ ಒಂಥರಾ ಚಡಪಡಿಕೆ ಶುರುವಾಯಿತು. ಆ ಚಡಪಡಿಕೆಯನ್ನು ತಣಿಸಿಕೊಳ್ಳಲು ಮೂರ್ಖ ಕೆಲಸವೊಂದನ್ನು ಮಾಡಿದೆ. ಕೊನೆಗೆ ಸಿಕ್ಕಿಬಿದ್ದೆ. ಗಂಡನಲ್ಲಿ ಇಲ್ಲದ ಪ್ಯಾಷನ್ನನ್ನು ಹೊರಗೆ ಇನ್ನಾರಲ್ಲೋ ಹುಡುಕಿಕೊಳ್ಳುತ್ತೇನೆ ಎನ್ನುವುದು ದಡ್ಡತನ. ಇನ್ಯಾರೋ ಒಬ್ಬರಲ್ಲಿ ನಮಗೆ ಕಕ್ಕುಲಾತಿ ಹುಟ್ಟಿತು ಎಂದಿಟ್ಟುಕೊಳ್ಳಿ, ಅದೂ ಬಹಳ ದಿನ ಉಳಿಯುವುದಿಲ್ಲ. ಅದಕ್ಕೇನೂ ಲೈಫ್ಲಾಂಗ್ ವ್ಯಾಲಿಡಿಟಿ ಇರುವುದಿಲ್ಲ. ಅದೂ ಹೀಗೆಯೇ, ಕೆಲ ದಿನಗಳಲ್ಲಿ ನೀರಸವಾಗುತ್ತದೆ. ಅದನ್ನು ರಸವತ್ತಾಗಿ ಇರಿಸಿಕೊಳ್ಳುವ ಕಲೆ ನಮ್ಮಲ್ಲೇ ಇದೆ. ನಮ್ಮ ಬಳಿ ಏನಿದೆಯೋ ಅದಕ್ಕೆ ತೃಪ್ತಿ ಪಟ್ಟುಕೊಳ್ಳುವುದು ತಿಳಿದಿದ್ದರೆ ಹೀಗೆ ಯಾರದ್ದೋ ಹಿಂದೆ ಹೋಗಿ ಮರ್ಯಾದೆ ಕಳೆದುಕೊಳ್ಳುವ ಪ್ರಮೇಯ ಬರುವುದಿಲ್ಲ.
ಇವೆಲ್ಲ ಕಾರಣಗಳೂ ನನ್ನ ತಪ್ಪಿಗೆಸಮರ್ಥನೆ ಎಂದು ನಿಮಗನ್ನಿಸಬಹುದು. ಖಂಡಿತ ಅಲ್ಲ. ನಾನು ಮಾಡಿದ್ದು ಪರಮ ಸ್ವಾರ್ಥದ ಕೆಲಸ. ಅದನ್ನು ಒಪ್ಪಿಕೊಳ್ಳಲೇಬೇಕು. ನಾನೇನು ಮಾಡಿದೆನೋ ಅದನ್ನು ಮಾಡದಿರುವ ನಿರ್ಧಾರವನ್ನು ಮೊದಲೇ ಕೈಗೊಳ್ಳಬಹುದಿತ್ತು. ಆದರೆ ಆಗ ನನ್ನ ಬುದ್ಧಿ ನನ್ನ ತಲೆಯಲ್ಲೇ ಇರಲಿಲ್ಲ ಅನ್ನಿಸುತ್ತದೆ. ಬಹುಶಃ ಬುದ್ಧಿಯಿಲ್ಲದ ಹುಡುಗಿಯೊಬ್ಬಳ ಜಾಗದಲ್ಲಿ ನಿಂತು ಯೋಚಿಸಿಬಿಟ್ಟೆ. ಆಗ ಹೊರಗೆ ಖುಷಿ ಹುಡುಕುವ ತಪ್ಪುಕೆಲಸವೇ ಸರಿ ಅನ್ನಿಸಿತು.
ಹೆಂಗಸರು ಗಂಡನಿಗೆ ಮೋಸ ಮಾಡುವ ಬಗ್ಗೆ ಬಹಳ ಲೇಖನಗಳನ್ನು ಓದಿದ್ದೇನೆ. ಹೆಚ್ಚುಕಮ್ಮಿ ಎಲ್ಲರೂ ತಮ್ಮ ಮದುವೆಯಲ್ಲಿ ತಮಗೆ ಸಂತೋಷ ಸಿಕ್ಕಿಲ್ಲ ಎಂಬ ನೆಪವನ್ನೇ ಹೇಳುತ್ತಾರೆ. ಆದರೆ, ನನ್ನ ಪ್ರಕಾರ ಸಂತೋಷ ನಮ್ಮೊಳಗಿನಿಂದಲೇ ಹುಟ್ಟಬೇಕು. ಇದನ್ನು ದಾರ್ಶನಿಕರಿಂದ ಹಿಡಿದು ಅಧ್ಯಾತ್ಮ ಚಿಂತಕರವರೆಗೆ, ಓಶೋನಿಂದ ಹಿಡಿದ ಇವತ್ತಿನ ಮನಶ್ಶಾಸ್ತ್ರಜ್ಞರವರೆಗೆ ಎಲ್ಲರೂ ಹೇಳಿದ್ದಾರೆ. ನಾನು ಸಂತೋಷವಾಗಿದ್ದೇನೆ ಎಂದು ನಮ್ಮ ಮನಸ್ಸನ್ನು ನಂಬಿಸುತ್ತ ಹೋಗಬೇಕು. ಆಗ ಅದೇ ನಮಗೆ ಸಂತೋಷವಾಗಿರುವ ದಾರಿಯನ್ನು ತೋರಿಸುತ್ತದೆ. ಗಂಡನಾಗಲೀ, ಹೆಂಡತಿಯಾಗಲೀ ಸಂತೋಷ ನೀಡಲು ಸಾಧ್ಯವಿಲ್ಲ. ಅವರು ನೀಡುವ ಸಂತೋಷ ಮರುಕ್ಷಣವೇ ಮುಗಿದುಹೋಗುತ್ತದೆ. ಅದರ ಬದಲು ನಮ್ಮೊಳಗೇ ಸಂತೋಷ ಹುಟ್ಟಿದರೆ ಅದು ಯಾವಾಗಲೂ ನಮ್ಮೊಂದಿಗಿರುತ್ತದೆ.
ನಾನೇನು ಮಾಡಿದೆನೋ ಅದಕ್ಕೀಗ ಪಶ್ಚಾತ್ತಾಪ ಪಡುತ್ತಿಲ್ಲ. ಏಕೆಂದರೆ ಡೈವೊರ್ಸ್ ಮೂಲಕ ನನಗೆ ನನ್ನ ಮಾಜಿ ಗಂಡ ಬೇರಾರೂ ಯಾವ ಕಾಲಕ್ಕೂನೀಡಲಾಗದ್ದನ್ನು ನೀಡಿದ್ದಾನೆ- ನನ್ನ ಖುಷಿಯನ್ನು ನನ್ನೊಳಗೇ ಹುಡುಕಿಕೊಳ್ಳುವುದು ಹೇಗೆಂಬುದನ್ನು ಕೊನೆಗೂ ನನಗೆ ಅರ್ಥ ಮಾಡಿಸಿದ್ದಾನೆ.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)
ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


