ಈಗಿನ ಸುದ್ದಿ

ರೈಲಲ್ಲೇ 'ನಿಖಾ' ಮಾಡಿಕೊಂಡ ಭೂಗತ ಪಾತಕಿ..!

ರೈಲಲ್ಲೇ 'ನಿಖಾ' ಮಾಡಿಕೊಂಡ ಭೂಗತ ಪಾತಕಿ..!
Published On :

ಮುಂಬೈ: ಭೂಗತ ಪಾತಕಿ ಅಬು ಸಲೇಂ ಮುಂಬೈ ಮೂಲದ ಮಹಿಳೆಯನ್ನು ರೈಲಲ್ಲೇ ಮದುವೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಇಂತಹುದೊಂದು ಸುದ್ದಿ ಬಿತ್ತಾರ ಮಾಡಿದ್ದು, ಮುಂಬೈ ಸರಣಿ ಸ್ಫೋಟ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಇದೇ ಜನವರಿ 8ರಂದು ಲಖನೌದಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದ ಅಬು ಸಲೇಂ, ಮುಂಬೈ ಮೂಲದ ಮಹಿಳೆಯೊಬ್ಬಳನ್ನು ವರಿಸಿದ್ದಾನೆ ಎಂದು ವರದಿ ಪ್ರಕಟಿಸಲಾಗಿದೆ. ಅಬು ಸಲೇಂನ ಈ ರೈಲು ಮದುವೆಗೆ ಆತನನ್ನು ಕರೆ ತರುತ್ತಿದ್ದ ಪೊಲೀಸರು ಮತ್ತು ಆತನ ಸೋದರಳಿಯ ರಷೀದ್ ಅನ್ಸಾರಿ ಸಾಕ್ಷಿಯಾಗಿದ್ದರು ಎಂದು ತಿಳಿದುಬಂದಿದೆ.

ಮುಂಬೈ ಮೂಲದ ಮುಸ್ಲಿಂ ಧರ್ಮ ಗುರುಗಳು ಮೊಬೈಲ್ ಮೂಲಕವೇ ಮಂತ್ರಪಠಣ ಮಾಡಿ ಮದುವೆ ನೆರವೇರಿಸಿ ಕೊಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ. ಆದರೆ ಈ ಬಗ್ಗೆ ಮಾಧ್ಯಮಗಳು ಅಬು ಸಲೇಂನನ್ನು ಪ್ರಶ್ನಿಸಿದಾಗ ತನ್ನ ವೈಯುಕ್ತಿಕ ವಿಚಾರಗಳ ಕುರಿತು ಚರ್ಚಿಸಲು ತನಗಿಷ್ಟವಿಲ್ಲ. ನ್ಯಾಯಾಲಯದ ವಿಚಾರಣೆ ಸಂಬಂಧ ಪ್ರಶ್ನೆಗಳಿದ್ದರೆ ಮಾತ್ರ ತಾನು ಉತ್ತರಿಸುವುದಾಗಿ ಹೇಳಿ ನುಣುಚಿಕೊಂಡಿದ್ದಾನೆ.

ಅಬು ಸಲೇಂನನ್ನು ವಿವಾಹವಾದ ಆ ಮಹಿಳೆ ಅಂದು ಟಾಡಾ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿಯೂ ಕಾಣಿಸಿಕೊಂಡಿದ್ದಳು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೂಲಗಳ ಪ್ರಕಾರ ಅಬು ಸೇಲಂ ವಿವಾಹವಾಗಿರುವ 27 ವರ್ಷದ ಆ ಮಹಿಳೆ ಅಬು ಸಲೇಂನ ಮುಂಬೈ ವಹಿವಾಟುಗಳನ್ನು ನೋಡಿಕೊಳ್ಳುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಭೂಗತ ಪಾತಕಿಯ ಈ ರೈಲು ವಿವಾಹದ ಕುರಿತು ಲಖನೌ ಪೊಲೀಸರಾಗಲಿ ಅಥವಾ ಮುಂಬೈ ಪೊಲೀಸರಾಗಲಿ ತುಟಿಪಿಟಿಕ್ ಎನ್ನುತ್ತಿಲ್ಲ. ಅಪರಾಧಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ಮತ್ತೆ ಸುರಕ್ಷಿತವಾಗಿ ಕರೆತರೆವುದಷ್ಟೇ ನಮ್ಮ ಕೆಲಸ ಎಂದಷ್ಟೇ ಹೇಳುತ್ತಿದ್ದಾರೆ.

ಒಂದು ವೇಳೆ ಈ ಮದುವೆ ನಿಜವೇ ಆಗಿದ್ದರೆ ಇದು ಆತನ ಮೂರನೇ ಮದುವೆ. ಇದಕ್ಕೂ ಮೊದಲು 1991ರಲ್ಲಿ ಸುಮೈರಾ ಜುಮಾನಿ ಎಂಬ ಯುವತಿಯನ್ನು ಅಬು ಸಲೇಂ ಮದುವೆಯಾಗಿದ್ದನು. ಇದಾದ ಬಳಿಕ ಬಾಲಿವುಡ್ ನಟಿ ಮೋನಿಕಾ ಬೇಡಿಯನ್ನು ಮದುವೆಯಾಗಿದ್ದಾನೆ ಎಂದು ಸುದ್ದಿ ಪ್ರಸಾರವಾಗಿತ್ತು. ಆದರೆ ತಾನು ಭೂಗತ ಪಾತಕಿಯನ್ನು ಮದುವೆಯಾಗಿಲ್ಲ ಎಂದು ಮೋನಿಕಾ ಬೇಡಿ ವಾದಿಸುತ್ತ ಬಂದಿದ್ದಳು.

ಅಬು ಸಲೇಂನ ರೈಲು ವಿವಾಹ ಇದೀಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪ್ರತೀ ಭಾರಿ ಮಾಧ್ಯಮಗಳಲ್ಲಿ ತನ್ನ ಪಾತಕ ಕೃತ್ಯಗಳಿಂದಲೇ ಸುದ್ದಿಯಾಗುತ್ತಿದ್ದ ಅಬು ಸಲೇಂ, ಸಧ್ಯ ಈಗ ಬೇರೆ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾನೆ. ಬಹುಶಃ ಈಗಿನ ಸುದ್ದಿ ಆತನಿಗೆ ಒಳಗೊಳಗೇ ಖುಷಿಯನ್ನುಂಟು ಮಾಡಿರಬಹುದು. ವಿನೂತನವಾಗಿ ಮದುವೆ ಮಾಡಿಕೊಂಡು ಸುದ್ದಿಯಾಗುತ್ತಿರುವವರ ಸಾಲಿಗೆ ಅಬು ಸಲೇಂನನ್ನು ಕೂಡ ಸೇರಿಸಬಹುದೇನೋ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.