ಉಪ್ಪಿಯ 'ಬ್ರಹ್ಮ'ನಿಗೆ ಮತ್ತೊಂದು ಕಂಟಕ..!

ಬೆಂಗಳೂರು: ನಟ ಉಪೇಂದ್ರ ಅಭಿನಯದ ಬ್ರಹ್ಮ ಚಿತ್ರ ಮತ್ತೊಂದು ವಿವಾದಲ್ಲಿ ಸಿಲುಕಿದ್ದು, ಚಿತ್ರದ ಟೈಟಲ್ ರೈಟ್ಸ್ ತಮ್ಮದೆಂದು ಫೈನಾನ್ಶಿಯರ್ ಮಾದೇಶ್ ಎಂಬುವವರು ಹೇಳಿದ್ದಾರೆ.
ಬ್ರಹ್ಮ ಚಿತ್ರದ ಶೀರ್ಷಿಕೆಯ ಹಕ್ಕು ತಮ್ಮ ಬಳಿ ಇದ್ದು, ನಿರ್ದೇಶಕ ಆರ್.ಚಂದ್ರು ಅವರು ತಮ್ಮನ್ನು ಸಂಪರ್ಕಿಸದಯೇ ಟೈಟಲ್ ಬಳಸಿಕೊಂಡಿದ್ದಾರೆ ಎಂದು ಮಾದೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಈ ಹಿಂದೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಲಿ ಅಥವಾ ಪದಾಧಿಕಾರಿಗಳಾಗಲಿ ಯಾವುದೇ ರೀತಿಯಲ್ಲಿಯೂ ಸ್ಪಂಧಿಸಲಿಲ್ಲ. ಹೀಗಾಗಿ ತಾವು ಸಿಟಿ ಸಿವಿಲ್ ಕೋರ್ಟ್ಗೆ ದೂರು ಸಲ್ಲಿಸಿದ್ದೇವೆ ಎಂದು ಮಾದೇಶ್ ತಿಳಿಸಿದ್ದಾರೆ.
ಇದೀಗ ಈ ದೂರಿನ ವಿಚಾರಣೆ ನಡೆಸಿರುವ ನ್ಯಾಯಾಲಯ ಚಿತ್ರ ನಿರ್ದೇಶಕ ಆರ್. ಚಂದ್ರು, ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರಾದ ಮಂಜುನಾಥ್ ಬಾಬು ಮತ್ತು ಹಳೆಯ ಬ್ರಹ್ಮ ಚಿತ್ರದ ನಿರ್ಮಾಪಕರಾದ ಶಾಂತಕುಮಾರ್ ಅವರಿಗೆ ನೋಟಿಸ್ ನೀಡಿದೆ. ಅಲ್ಲದೆ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಬ್ರಹ್ಮ ಚಿತ್ರವು ಚಿತ್ರೀಕರಣದ ಆರಂಭದಿಂದಲೂ ವಿವಾದಗಳಿಂದಲೇ ಹೆಸರು ಮಾಡುತ್ತಿದ್ದು, ಇದೀಗ ಟೈಟಲ್ ಕುರಿತ ವಿವಾದದಲ್ಲಿ ಸಿಲುಕಿ ಚಿತ್ರತಂಡ ಮತ್ತೆ ಸುದ್ದಿಯಲ್ಲಿದೆ.
ನಿರ್ಮಾಪಕ ಮಾದೇಶ್ ಹೇಳುವಂತೆ 1996ರಲ್ಲಿ ಸೆಟ್ಟೇರಿದ್ದ ಹಳೆಯ ಬ್ರಹ್ಮ ಚಿತ್ರ ಬಹುತಾರಾಗಣದ ಚಿತ್ರವಾಗಿತ್ತು. ಚಿತ್ರದಲ್ಲಿ ದಿವಂಗತ ನಟ ಟೈಗರ್ ಪ್ರಭಾಕರ್, ಅಂಬರೀಷ್, ಶಶಿಕುಮಾರ್ ಮತ್ತು ಸುದೀಪ್ ಅವರು ಅಭಿನಯಿಸಿದ್ದರು. ಈ ಚಿತ್ರದ ಮೂಲಕವೇ ನಟ ಸುದೀಪ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೆವು. ಪ್ರಭಾಕರ್ ಅವರ ಅಕಾಲಿಕ ಮರಣ ಮತ್ತು ನಟ ಶಶಿಕುಮಾರ್ ಅವರಿಗೆ ಅಪಘಾತವಾಗಿ ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು. ಆದರೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಚಿತ್ರವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಚಿತ್ರದಿಂದ ತಮಗೆ ಸಾಕಷ್ಟು ನಷ್ಟವಾಗಿತ್ತು. ಇದರಿಂದಾಗಿ ನಿರ್ಮಾಪಕ ಶಾಂತಕುಮಾರ್ ಅವರು ಚಿತ್ರದ ಟೈಟಲ್ ಹಕ್ಕನ್ನು ತಮಗೆ ನೀಡಿದ್ದರು. ಆದರೆ ನಿರ್ದೇಶಕ ಆರ್. ಚಂದ್ರು ಅವರು ನಮ್ಮ ಒಪ್ಪಿಗೆ ಪಡೆಯದೆಯೇ ಬ್ರಹ್ಮ ಶೀರ್ಷಿಕೆಯನ್ನು ಬಳಸಿಕೊಂಡಿದ್ದಾರೆ ಎಂದು ಫೈನಾನ್ಶಿಯರ್ ಮಾದೇಶ್ ಆರೋಪಿಸಿದ್ದಾರೆ.
ಆದರೆ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯವರು ಹೇಳುವುದೇ ಬೇರೆ. ವಾಣಿಜ್ಯ ಮಂಡಳಿ ಸದಸ್ಯರಾದ ಮಹದೇವ್ ಅವರು ಹೇಳುವಂತೆ, 1996ರಲ್ಲಿ ಬ್ರಹ್ಮ ಹೆಸರಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರವನ್ನು ಪೂರ್ಣಗೊಳಿಸಲಾಗದೇ ಚಿತ್ರೀಕರಣ ಸ್ಥಗಿತವಾಗಿತ್ತು. ವಾಣಿಜ್ಯ ಮಂಡಳಿಯ ನಿಯಮಾನುಸಾರ ಯಾವುದೇ ಶೀರ್ಷಿಕೆಯ ಹಕ್ಕನ್ನು ಒಂದು ವರ್ಷದವರೆಗೆ ಮಾತ್ರ ನೀಡಲಾಗಿರುತ್ತದೆ. ಒಂದು ವರ್ಷದ ಬಳಿಕ ಅವರು ಹಕ್ಕನ್ನು ಮತ್ತೆ ನವೀಕರಣಗೊಳಿಸಬೇಕಿತ್ತು. ಹೀಗಾಗಿ ನಾವು ಬ್ರಹ್ಮ ಚಿತ್ರದ ಹೆಸರಲ್ಲಿ ಸಿನಿಮಾ ಮಾಡಲು ಒಪ್ಪಿಗೆ ನೀಡಿದ್ದೇವೆ ಎಂದು ಮಹದೇವ್ ಹೇಳಿದರು.
ಕಡೆಗೂ 'ಬ್ರಹ್ಮ'ನ ಟೈಟಲ್ ವಿವಾದ ಸುಖಾಂತ್ಯ
ವಿವಾದಕ್ಕೆ ಗುರಿಯಾಗಿದ್ದ ಬ್ರಹ್ಮ ಚಿತ್ರದ ಶೀರ್ಷಿಕೆ ವಿವಾದ ಸುಖಾಂತ್ಯವಾಗಿದ್ದು, ವಾಣಿಜ್ಯ ಮಂಡಳಿಯ ಮಧ್ಯ ಪ್ರವೇಶದಿಂದಾಗಿ ದೂರು ನೀಡಿದ್ದ ಫೈನಾನ್ಶಿಯರ್ ಮಾದೇಶ್ ತಮ್ಮ ದೂರನ್ನು ವಾಪಸ್ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ.
ಒಟ್ಟಾರೆ ಪದೇ ಪದೇ ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗುತ್ತಿರುವ ಬ್ರಹ್ಮ ಚಿತ್ರತಂಡ ಇತ್ತೀಚೆಗೆ ಥಿಯೇಟರ್ಗಾಗಿಯೂ ಖ್ಯಾತೆ ತೆಗೆದಿತ್ತು. ಈ ಹಿಂದೆಯೂ ಥಿಯೇಟರ್ಗಾಗಿ ಗಲಾಟೆ ಮಾಡಿಕೊಂಡಿದ್ದ ಚಿತ್ರತಂಡ ಸಂತೋಷ್ ಚಿತ್ರಮಂದಿರಕ್ಕಾಗಿ ಬೇಡಿಕೆ ಇಟ್ಟಿತ್ತು. ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಗಣೇಶ್ ಅಭಿನಯದ ಶ್ರಾವಣಿ ಸುಭ್ರಮಣ್ಯ ಚಿತ್ರವನ್ನು ಬಲವಂತವಾಗಿ ತೆಗೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಚಿತ್ರದ ನಿರ್ಮಾಪಕ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಈ ವಿಚಾರ ಇನ್ನೂ ಬಗೆಹರಿದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


