ತೆಲಂಗಾಣ ವಿಧೇಯಕ ಅಂಗೀಕಾರ, ಸೀಮಾಂಧ್ರ ಸಂಸದರ ಆಕ್ರೋಶ

ನವದೆಹಲಿ: ತೆಲಂಗಾಣ ವಿಧೇಯಕ ಅಂಗೀಕಾರವನ್ನು ವಿರೋಧಿಸಿ ಸೀಮಾಂಧ್ರ ಸಂಸದರಾದ ಎಲ್. ರಾಜಗೋಪಾಲ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜಿನಾಮೆ ನೀಡಿದ್ದಾರೆ.
ತೀವ್ರ ವಿರೋಧದ ನಡುವೆಯೂ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ಲೋಕಸಭೆಯಲ್ಲಿ ಇಂದು ಅಂಗೀಕಾರ ದೊರೆತಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಸಂಸದ ಸ್ಧಾನಕ್ಕೆ ರಾಜಗೋಪಾಲ್ ಅವರು ರಾಜಿನಾಮೆ ನೀಡಿದ್ದು, ತಮ್ಮ ರಾಜಿನಾಮೆ ಪತ್ರವನ್ನು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರಿಗೆ ರವಾನಿಸಿದ್ದಾರೆ.
ತೆಲಂಗಾಣ ವಿಧೇಯಕ ಅಂಗೀಕಾರ ವಿರೋಧಿಸಿ ಕೇಂದ್ರ ಸಚಿವೆ ಪುರಂದರೇಶ್ವರಿ ಅವರು ರಾಜಿನಾಮೆ ನೀಡಿದ್ದಾರೆ.
ಪುರಂದರೇಶ್ವರಿ, ಸೀಮಾಂಧ್ರದ ವಿಶಾಖಪಟ್ಟಣಂನ ಸಂಸದೆಯಾಗಿದ್ದು, ತಮ್ಮ ಸಚಿವ ಸ್ಥಾನ ಹಾಗೂ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಮತ್ತೊಂದೆಡೆ, ತೆಲಂಗಾಣ ವಿಧೇಯಕ ಅಂಗೀಕಾರ ವಿರೋಧಿಸಿ ಆಂಧ್ರಪ್ರದೇಶದ ಶಿಕ್ಷಣ ಸಚಿವ ಕೆ. ಪಾರ್ಥಸಾರಥಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇಂದು ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ದೇಶದ ಚರಿತ್ರೆಯಲ್ಲೇ ಇಂದು ಕರಾಳ ದಿನ: ಜಗನ್
ದೇಶದ ಚರಿತ್ರೆಯಲ್ಲೇ ಇಂದು ಕರಾಳ ದಿನ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಣತಿಯಂತೆ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಹಾಗು ಸಂಸದ ಜಗನ್ ಮೋಹನ್ ರೆಡ್ಡಿ ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಯಾವುದೇ ವಿಧೇಯಕಕ್ಕೆ ಅಂಗೀಕಾರ ನೀಡುವ ಮೊದಲು ಚರ್ಚೆಗೆ ಅವಕಾಶ ನೀಡಬೇಕು. ಆದರೆ ದುರದೃಷ್ಟವಶಾತ್ ಯಾವುದೇ ಚರ್ಚೆಗೆ ಅವಕಾಶ ನೀಡದೆ ಮಸೂದೆಯನ್ನು ಅಂಗೀಕಾರಿಸಲಾಗಿದೆ. ಇದು ಅಸಾಂವಿಧಾನಿಕ ಎಂದು ಜಗನ್ ಆರೋಪಿಸಿದ್ದಾರೆ. ಅಲ್ಲದೆ ತೆಲಂಗಾಣ ವಿಧೇಯಕ ಅಂಗೀಕಾರ ವಿರೋಧಿಸಿ ನಾಳೆ ಸೀಮಾಂಧ್ರ ಬಂದ್ಗೆ ಕರೆ ನೀಡಿದ್ದಾರೆ.
ತೆಲಂಗಾಣ ವಿಧೇಯಕ ಅಂಗೀಕಾರ ದುರದೃಷ್ಟಕರ: ಚಿರಂಜೀವಿ
ತೆಲಂಗಾಣ ವಿಧೇಯಕ ಅಂಗೀಕಾರ ದುರದೃಷ್ಟಕರ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಚಿರಂಜೀವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತೆಲಂಗಾಣ ವಿಧೇಯಕ ಅಂಗೀಕಾರ ವಿರೋಧಿಸಿ ರಾಜಿನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಅಖಂಡ ಆಂಧ್ರಪ್ರದೇಶ ಇಬ್ಭಾಗಕ್ಕೆ ಚಾಲನೆ ಸಿಗುತ್ತಿದಂತೆ ಸೀಮಾಂಧ್ರದಾದ್ಯಂತ ಪ್ರತಿಭಟನೆಗಳ ಕಾವು ಜೋರಾಗಿವೆ. ಜನರು ಬೀದಿಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


