ಈಗಿನ ಸುದ್ದಿ

ಟೀ ಆಯ್ತು, ಈಗ 'ನಮೋ ಫಿಶ್ ಸ್ಟಾಲ್‌'

ಟೀ ಆಯ್ತು, ಈಗ 'ನಮೋ ಫಿಶ್ ಸ್ಟಾಲ್‌'
ಚಿತ್ರ ಕೃಪೆ: ಎನ್ ಡಿಟಿವಿ
Published On :

ಚೆನ್ನೈ: ದೇಶಾದ್ಯಂತ ನಮೋ ಟೀ ಸ್ಟಾಲ್ ಯಶಸ್ವಿಯಾಗುತ್ತಿದ್ದಂತೆಯೇ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳುನಾಡು ಬಿಜೆಪಿ ಕಾರ್ಯಕರ್ತರು 'ನಮೋ ಫಿಶ್ ಸ್ಟಾಲ್‌'  ತೆರೆದಿದ್ದಾರೆ.

ದಿನಕಳೆದಂತೆ ಲೋಕಭಾ ಚುನಾವಣೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರಚಾರ ಕಾರ್ಯ ಮಾಡುತ್ತಿವೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಪ್ರಚಾರ ಕಾರ್ಯಕ್ಕಿಳಿದಿದ್ದ ನರೇಂದ್ರ ಮೋದಿ ಅವರು ವಿವಿಧ ರೀತಿಯ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಈ ಪೈಕಿ ನಮೋ ಟೀ ಮತ್ತು ಚಾಯ್ ಪೇ ಚರ್ಚಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿದ್ದಂತೆಯೇ ಚೆನ್ನೈನಲ್ಲಿ 'ನಮೋ ಫಿಶ್ ಸ್ಟಾಲ್‌' ತೆರೆಯಲಾಗಿದೆ.

ಚೆನ್ನೈನ ಬಿಜೆಪಿ ಮುಖಂಡ ಎಲ್.ಗಣೇಶನ್ ಅವರು ನಮೋ ಫಿಶ್ ಸ್ಟಾಲ್ ಅನ್ನು ಇಂದು ಉದ್ಘಾಟಿಸಿದ್ದಾರೆ. 'ದೇಶದ ಮೀನುಗಾರ ವರ್ಗವನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ' ಎಂದು ಚೆನ್ನೈ ಬಿಜೆಪಿ ಘಟಕದ ಮುಖಂಡ ತಮಿಳಿಸೈ ಸುಂದರಾಜನ್ ತಿಳಿಸಿದ್ದಾರೆ. 'ಕೇವಲ ಮೀನುಗಾರ ವರ್ಗದ ಮತಬೇಟೆಗಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಬದಲಿಗೆ ಸಮಾಜದಲ್ಲಿ ಮೀನುಗಾರರ ವರ್ಗ ಎಲ್ಲೋ ಒಂದುಕಡೆ ತುಳಿತಕ್ಕೊಳಗಾಗಿದೆ. ಸರ್ಕಾರದ ಸಾಕಷ್ಟು ಯೋಜನೆಗಳು ಬೆಸ್ತರನ್ನು ತಲುಪುವುದೇ ಇಲ್ಲ. ನಮ್ಮ 'ನಮೋ ಫಿಶ್ ಸ್ಟಾಲ್‌' ಮುಖಾಂತರ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಗುರಿ' ಎಂದು ಸುಂದರಾಜನ್ ಹೇಳಿದರು.

ಮೀನುಗಾರರ ಅನ್ನಕ್ಕೆ ಕನ್ನ ಹಾಕಿದ 'ನಮೋ ಫಿಶ್ ಸ್ಟಾಲ್‌'..?
ನೂತನವಾಗಿ ತಲೆ ಎತ್ತಿರುವ 'ನಮೋ ಫಿಶ್ ಸ್ಟಾಲ್‌' ತಮ್ಮ 'ಅನ್ನಕ್ಕೆ ಕನ್ನ' ಹಾಕಬಹುದು ಎಂದು ಚೆನ್ನೈ ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. 'ನಮೋ ಫಿಶ್ ಸ್ಟಾಲ್‌' ಜನರನ್ನು ತನ್ನತ್ತ ಸೆಳೆಯಲು ಕಡಿಮೆ ದರಕ್ಕೆ ಮೀನು ಮಾರಾಟ ಮಾಡಿದರೆ ಮತ್ತು ಜನರೆಲ್ಲ ಅಲ್ಲಿಯೇ ಮೀನುಕೊಳ್ಳಲು ಮುಗಿ ಬಿದ್ದರೆ ನಮ್ಮ ಗತಿಯೇನು ಎಂದು ಸ್ಥಳೀಯ ಮೀನುಗಾರರಾದ ಲಿಂಗಮ್ ಪ್ರಶ್ನಿದ್ದಾರೆ.

ಒಟ್ಟಾರೆ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಮಾಜದ ವಿವಿಧ ವರ್ಗಗಳ ಮೇಲಿನ ರಾಜಕೀಯ ಪಕ್ಷಗಳ ಕಾಳಜಿ ಚುನಾವಣೆಯ ನಂತರವೂ ಹೀಗೆ ಇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.